ಉಡುಪಿ ಜಿಲ್ಲೆಯಲ್ಲಿ ಮಳೆ ಇಳಿಮುಖ; 3 ಮನೆಗಳಿಗೆ ಹಾನಿ
ಉಡುಪಿ, ಆ.6: ಸತತ ಮೂರ್ನಾಲ್ಕು ದಿನಗಳ ಬಿರುಸಿನ ಮಳೆಯ ಬಳಿಕ ಇಂದು ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಿದೆ. ಇಂದು ದಿನದ ಹೆಚ್ಚಿನ ಅವಧಿಯಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.
ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 28.2ಮಿ.ಮೀ ಮಳೆ ಮಾತ್ರ ಬಿದ್ದಿದೆ. ಮಳೆ-ಗಾಳಿಯಿಂದಾಗಿ ಜಿಲ್ಲೆಯ ಮೂರು ಮನೆಗಳಿಗೆ ಭಾಗಶ: ಹಾನಿಯಾದ ವರದಿ ಬಂದಿದ್ದು, ಸುಮಾರು ಎರಡು ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ವಿನೋದ ಬಾಯಿ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿ ಗೊಂಡಿದ್ದು, 40ಸಾವಿರದಷ್ಟು ನಷ್ಟವಾಗಿದ್ದರೆ, ಯಡ್ತರೆಯ ಶ್ರೀನಿವಾಸ ಎಂಬವರ ಮನೆಗೆ ಭಾರೀ ಹಾನಿ ಯಾಗಿದ್ದು ಸುಮಾರು ಒಂದು ಲಕ್ಷ ರೂ.ನಷ್ಟು ಹಾನಿಯಾಗಿದೆ. ಅದೇ ರೀತಿ ಕಾಪು ತಾಲೂಕು ಪಡು ಗ್ರಾಮದ ರವೀಂದ್ರ ಎಂಬವರ ಮನೆ ಮಳೆಯಿಂದ ಭಾಗಶ: ಹಾನಿಯಾಗಿ 40ಸಾವಿರ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 38.1ಮಿ.ಮೀ. ಮಳೆಯಾದರೆ ಬೈಂದೂರಿನಲ್ಲಿ 37.0, ಹೆಬ್ರಿಯಲ್ಲಿ 32.2, ಕುಂದಾಪುರದಲ್ಲಿ 26.4, ಉಡುಪಿಯಲ್ಲಿ 17.1, ಬ್ರಹ್ಮಾವರದಲ್ಲಿ 14.5 ಹಾಗೂ ಕಾಪುವಿನಲ್ಲಿ 12.7 ಮಿ.ಮೀ. ಮಳೆಯಾದ ವರದಿ ಬಂದಿದೆ.
ಈ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಎಂಬಲ್ಲಿ ಬಿದ್ದಿದ್ದು, ಇಲ್ಲಿ 138ಮಿ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಾಗಿರುವುದು ಕಾರ್ಕಳ ತಾಲೂಕಿನ ಶಿರ್ಲಾಲುವಿನಲ್ಲಿ. ಇಲ್ಲಿ 65.5ಮಿ.ಮೀ. ಮಳೆಯಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ 81ಮಿ.ಮೀ. ಹಾಗೂ ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ನಿಲ್ಕುಂಡ ದಲ್ಲಿ 82.5ಮಿ.ಮೀ. ಮಳೆ ಬಿದ್ದಿದೆ. ಉಡುಪಿ ಜಿಲ್ಲೆಯಲ್ಲಿ ಇಂದು 50ಮಿ.ಮೀ.ಗಿಂತ ಅಧಿಕ ಮಳೆ ಬಿದ್ದ ಗ್ರಾಮಗಳಲ್ಲಿ ಮಾಳ (61.5), ಶಿರೂರು (57), ಯರ್ಲಪಾಡಿ (53.5) ಹಾಗೂ ವರಂಗ (50.5) ಸೇರಿವೆ.
ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 1ರಿಂದ ಇಂದು ಬೆಳಗಿನವರಗೆ ಒಟ್ಟು 374ಮಿ.ಮೀ. ಮಳೆಯಾಗುವ ಮೂಲಕ ಶೇ.51ರಷ್ಟು ಅಧಿಕ ಮಳೆ ಸುರಿದಿದೆ. ಇದರಿಂದ ಜ.1ರಿಂದ ಇದುವರೆಗಿನ ಮಳೆಯಲ್ಲಿ ಕಂಡುಬಂದ ಕೊರತೆ ಶೇ.29ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಜೂನ್‌ನಲ್ಲಿ ಶೇ.50 ಹಾಗೂ ಜುಲೈನಲ್ಲಿ ಶೇ.27ರಷ್ಟು ಮಳೆ ಕೊರತೆ ಕಂಡುಬಂದಿತ್ತು.