×
Ad

ಉಡುಪಿ ಜಿಲ್ಲೆಯಲ್ಲಿ ಒಟ್ಟು 3.19 ಲಕ್ಷ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಡಿಸಿ ಸ್ವರೂಪ ಟಿ.ಕೆ.

Update: 2025-09-04 20:26 IST

ಉಡುಪಿ, ಸೆ.4: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು 3.19 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇಂದು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಸುಮಾರು 1.05 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2.14 ಲಕ್ಷ ಕುಟುಂಬ ಸೇರಿದಂತೆ ಒಟ್ಟು ಸುಮಾರು 3.19 ಲಕ್ಷ ಕುಟುಂಬಗಳಿದ್ದು, ಈ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಬೇಕಾಗಿದೆ. ಸಮೀಕ್ಷೆಯ ವೇಳೆ ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದವರು ಸೂಚನೆ ನೀಡಿದರಲ್ಲದೇ, ವ್ಯವಸ್ಥಿತ ಸಮೀಕ್ಷೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಜಿಯೋ ಟ್ಯಾಗಿಂಗ್: ಸಾಮಾನ್ಯವಾಗಿ ಜಿಲ್ಲೆಯ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ, ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಮನೆಗಳಿಗೆ ಜಿಯೋ ಟ್ಯಾಗಿಂಗ್‌ಗಾಗಿ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಸೆಪ್ಟಂಬರ್ 10ರ ಒಳಗೆ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯವನ್ನು ಮೆಸ್ಕಾಂ ಇಲಾಖೆ ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ಅನಧಿಕೃತ ಕಟ್ಟಡಗಳು, ಕೆಲವು ಪ್ರದೇಶಗಳಲ್ಲಿ ಆರ್.ಆರ್.ನಂಬರ್ ಹೊಂದದೇ ಇರುವ ಕುಟುಂಬಗಳೂ ಜಿಲ್ಲೆಯ ಲ್ಲಿವೆ. ಅಂತಹ ಕುಟುಂಬ ಗಳೂ ಕೂಡ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಅಂತಹ ಕುಟುಂಬಗಳ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ, ಸದರಿ ಮನೆಗಳಿಗೂ ಸಹ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಯೋ ಟ್ಯಾಗ್ ಮಾಡಲು ಕ್ರಮಕೈಗೊಳ್ಳಬೇಕು ಎಂದವರು ಸೂಚನೆ ನೀಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಸೆಪ್ಟಂಬರ್ 22ರಿಂದ ಪ್ರಾರಂಭಗೊಂಡು ಅಕ್ಟೋಬರ್ 07ರೊಳಗೆ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು ಶಾಲಾ ಶಿಕ್ಷಕರು ಕೈಗೊಳ್ಳಲಿದ್ದು, ಸಮೀಕ್ಷೆಗಾಗಿಯೇ ವಿಶೇಷವಾದ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಆ ಆಪ್ ಮೂಲಕವೇ ಸಮೀಕ್ಷೆ ನಡೆಸಲಾಗುವುದು ಎಂದರು.

ತಲಾ 80 ಕುಟುಂಬಗಳ ಸಮೀಕ್ಷೆ: ಜಿಲ್ಲೆಯಲ್ಲಿ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ, ಪ್ರತಿ ಸಮೀಕ್ಷೆ ದಾರರು ಕನಿಷ್ಟ 80ರಿಂದ 100 ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ಮಾಡಬೇಕಾಗುತ್ತದೆ. ರಾಜ್ಯ ಮಟ್ಟದಲ್ಲಿ ಮಾಸ್ಟರ್ ಟ್ರೈನರ್ಸ್‌ಗಳ ತರಬೇತಿಯು ಇದೆ ಸೆಪ್ಟೆಂಬರ್ 8ರಂದು ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ಸೆಪ್ಟೆಂಬರ್ 9-11ರವರೆಗೆ ಈ ತರಬೇತಿ ಯನ್ನು ಆಯೋಜಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ದಂತೆ ಸರಕಾರದಿಂದ ನೀಡಲಾಗುವ ಸೂಚನೆಗಳು, ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗಳು ತಪ್ಪದೆ ಪಾಲಿಸಬೇಕು. ಹಾಗೂ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದರು.

ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಂಡಿರುವ ಬಗ್ಗೆ ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ನೀಡಬೇಕು ಎಂದ ಅವರು, ಸಮೀಕ್ಷೆ ಕಾರ್ಯಗಳ ಮೇಲುಸ್ತುವಾರಿ ಮಾಡಲು ಪ್ರತಿ ತಾಲೂಕಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ವಿವಿಧ ಜಿಲ್ಲಾ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News