ಉಡುಪಿ ಜಿಲ್ಲೆಯಲ್ಲಿ 3570 ಮಂದಿಗೆ 35 ಕೋಟಿ ಸಾಲ ಸಬ್ಸಿಡಿ ವಿತರಣೆ; ವಿಶ್ವಕರ್ಮ ಯೋಜನೆ
ಉಡುಪಿ, ಜೂ.23: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಬಡವರ ಕಲ್ಯಾಣ ಯೋಜನೆಯಾದ ವಿಶ್ವಕರ್ಮ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ ಈವರೆಗೆ 3570 ಫಲಾನುಭವಿಗಳಿಗೆ 35 ಕೋಟಿ ರೂ. ಸಾಲ ವಿತರಿಸಲಾ ಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಾರಕೂರು ಪಂಚಾಯತ್‌ನಲ್ಲಿ ವಿಶ್ವಕರ್ಮ ಯೋಜನೆಯ ಫಲಾನು ಭವಿಗಳಿಗೆ ವಿವಿದ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು. ಅರ್ಹ ಫಲಾನುಭವಿಗಳಿಗೆ 15,000 ರೂ. ಮೊತ್ತ ಕಾರ್ಮಿಕ ಸಲಕರಣೆ ಕಿಟ್ ವಿತರಿಸಲಾಗಿದೆ ಎಂದು ಅವರು ಹೇಳಿದರು.
ವಿಶ್ವಕರ್ಮ ಯೋಜನೆಯ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದ ಸಂಸದರು, ಇದನ್ನು ಮೊದಲ ಸ್ಥಾನಕ್ಕೆ ತರಲು ಅಧಿಕಾರಿಗಳು ಸೇರಿದಂತೆ ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ತಲೆತಲಾಂತರದಿಂದ ತಮ್ಮ ಸಾಂಪ್ರದಾಯಿಕ ಕುಲ ಕಸುಬು ಗಳಿಂದ ಬದುಕುತ್ತಿದ್ದ ಕುಶಲ ಕರ್ಮಿಗಳಿಗೆ ಅವರ ವೃತ್ತಿಯ ನೈಪುಣ್ಯತೆ ಹೆಚ್ಚಿಸಲು ಸೂಕ್ತ ತರಬೇತಿ ನೀಡಿ ಉಚಿತ ಕಿಟ್‌ನೊಂದಿಗೆ ಹಂತ ಹಂತವಾಗಿ 3 ಲಕ್ಷ ರೂ. ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆ ಇದಾಗಿದ್ದು, ಇದರಿಂದ ಸಾಂಪ್ರದಾಯಿಕ ವೃತ್ತಿಪರರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಕೋಟ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಅವರು ವಿಶ್ವಕರ್ಮ ಯೋಜನೆಯಂತಹ ಉತ್ತಮ ಯೋಜನೆ ಇಂದು ಸಂಸದರ ಮೂಲಕ ಮನೆ ಮನೆಗೆ ತಲುಪುವುದು ಸ್ವಾಗತಾರ್ಹ ಎಂದರು.
ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದನಾ, ಅಂಚೆ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು. ಬಾರ್ಕೂರು ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಸ್ವಾಗತಿಸಿ ವಂದಿಸಿದರು.