×
Ad

ಜಲಜೀವನ್ ಮಿಷನ್: ಉಡುಪಿ ಜಿಲ್ಲೆಯಲ್ಲಿ 525ರಲ್ಲಿ 487 ಕಾಮಗಾರಿ ಪೂರ್ಣ

Update: 2025-10-06 20:51 IST

ಉಡುಪಿ, ಅ.6: ಉಡುಪಿ ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಯಡಿ ಗ್ರಾಮೀಣ ಭಾಗದ ಪ್ರತಿ ಮನೆಗೂ ಶುದ್ದ ಕುಡಿಯುವ ನೀರನ್ನು ಒದಗಿಸಲು ಒಟ್ಟು 525 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳಲ್ಲಿ 487 ಕಾಮಗಾರಿಗಳು ಪೂರ್ಣಗೊಂಡಿದ್ದು, 38 ಕಾಮಗಾರಿಗಳು ಪ್ರಗತಿ ಯಲ್ಲಿವೆ. ಈ ಮೂಲಕ ಜಿಲ್ಲೆಯಲ್ಲಿ ಶೇ.93ರಷ್ಟು ಗುರಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾ ರಣೆಯ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ನಿಗದಿತ ನಳ್ಳಿ ನೀರಿನ ಸಂಪರ್ಕ ಒಟ್ಟು 1,80,868 ಇದ್ದು, ಇದರಲ್ಲಿ 1,49,416 ಸಂಪರ್ಕ ನೀಡಲಾ ಗಿದೆ. ತನ್ಮೂಲಕ ಶೇ.83ರಷ್ಟು ಗುರಿ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 540.76 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾದ ಜಲ್‌ಜೀವನ್ ಮಿಷನ್ ಯೋಜನೆಯಡಿ ನಿಗದಿಯಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆ ಯಲ್ಲಿ ಪ್ರತಿ ಮನೆಗೂ ನೀರಿನ ಸಂಪರ್ಕ ಒದಗಿಸಿ ಶೇ.100ರಷ್ಟು ಪ್ರಗತಿ ದಾಖಲಿಸಬೇಕು ಎಂದು ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆಗಳನ್ನು ನೀಡಿದರು.

ಅರಣ್ಯ ಇಲಾಖೆ ಅನುಮತಿ ಪಡೆಯಿರಿ: ಕಾರ್ಕಳ ಮತ್ತು ಕುಂದಾಪುರ ವ್ಯಾಪ್ತಿಯಲ್ಲಿ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಮತ್ತು ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಗಳಿಗೆ ಅರಣ್ಯ ಇಲಾಖೆ ಅನುಮತಿ ಅಗತ್ಯವಿದ್ದು, ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ನಳ್ಳಿ ನೀರಿನ ಸಂಪರ್ಕಗಳ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಕಾಮಗಾರಿ ಮುಗಿದಿರುವ ಬಗ್ಗೆ ವರದಿ ಸಲ್ಲಿಸಬೇಕು. ಗ್ರಾಮೀಣ ಭಾಗದ ಕುಡಿಯುವ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳೂ ಪರಿಶೀಲಿಸಿ ನೀರು ಕುಡಿಯಲು ಯೋಗ್ಯವಾಗಿರುವುದನ್ನು ಖಚಿತಪಡಿಸಿ ಕೊಳ್ಳಬೇಕು ಎಂದೂ ಅವರು ನುಡಿದರು.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೈಂದೂರು ತಾಲೂಕಿನ 788 ಗ್ರಾಮೀಣ ಜನವಸತಿ ಮತ್ತು ಬೈಂದೂರು ಪಟ್ಟಣ ವ್ಯಾಪ್ತಿಯಲ್ಲಿ 305.12 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಕೆಪಿಸಿ ಡ್ಯಾಂ ಬಳಿ ವಾರಾಹಿ ನದಿಯಿಂದ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕಿನ 69 ಬೃಹತ್ ನೀರು ಸರಬರಾಜು ಯೋಜನೆಯಲ್ಲಿ 528.42 ಕೋಟಿ ರೂ.ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣ ಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಉದಯ್‌ಕುಮಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯ 7 ತಾಲೂಕುಗಳ 155 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ 246 ಗ್ರಾಮಗಳ 3,402 ಆವಾಸಸ್ಥಾನಗಳ 2,47,190 ಮನೆಗಳಲ್ಲಿ 2,15,738 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದ್ದು 31,452 ಮನೆಗಳಿಗೆ ನೀರಿನ ಸಂಪರ್ಕ ನೀಡಲು ಬಾಕಿ ಇದೆ.’

-ಪ್ರತೀಕ್ ಬಾಯಲ್, ಉಡುಪಿ ಜಿಲ್ಲಾ ಪಂಚಾಯತ್ ಸಿಇಓ.





 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News