×
Ad

ಉಡುಪಿ ಪರ್ಯಾಯೋತ್ಸವ: ಜ.8ಕ್ಕೆ ಪುತ್ತಿಗೆ ಶ್ರೀಗಳ ಪುರಪ್ರವೇಶ, ಪೌರಸನ್ಮಾನ

Update: 2024-01-06 20:46 IST

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ 2024ರ ಜನವರಿ 18ರ ಮುಂಜಾನೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ನಾಲ್ಕನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡುವ ಹಿನ್ನೆಲೆಯಲ್ಲಿ ಜ.8ರಂದು ತೀರ್ಥಯಾತ್ರೆ ಮುಗಿಸಿ ಪುರಪ್ರವೇಶ ಮಾಡಲಿದ್ದು, ಅಂದು ಸಂಜೆ ಅವರಿಗೆ ರಥಬೀದಿಯಲ್ಲಿ ಪೌರ ಸನ್ಮಾನ ನಡೆಯಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.

ಪುತ್ತಿಗೆ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥರು ಹಾಗೂ ಅವರ ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರ ಪುರಪ್ರವೇಶ ಮತ್ತು ಪೌರಸನ್ಮಾನ ಕಾರ್ಯಕ್ರಮ ಜನವರಿ 8ರ ಸೋಮವಾರ ಸಂಜೆ 7 ಗಂಟೆಗೆ ಉಡುಪಿ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ನಡೆಯಲಿದೆ ಎಂದು ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದರು.

ಶ್ರೀಸುಗುಣೇಂದ್ರತೀರ್ಥರು ಜನವರಿ 18ರಂದು ಬೆಳಗಿನ ಜಾವ ದಂಡತೀರ್ಥದಿಂದ ಉಡುಪಿ ಜೋಡುಕೆರೆಗೆ ಬಂದು ಅಲ್ಲಿಂದ ಮೆರವಣಿಗೆಯಲ್ಲಿ ಬಂದು ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಇದೀಗ ಪರ್ಯಾಯ ಪೂರ್ವಭಾವಿಯಾಗಿ ಅವರು ದೇಶ-ವಿದೇಶಗಳಲ್ಲಿ ಸಂಚರಿಸಿದ ಬಳಿಕ ಜ.8ರಂದು ಉಡುಪಿಗೆ ಪುರಪ್ರವೇಶಗೈಯುವರು. ಅಂದು ಅಪರಾಹ್ನ 3:30ಕ್ಕೆ ಜೋಡುಕಟ್ಟೆಯಲ್ಲಿ ಅವರನ್ನು ಭವ್ಯವಾಗಿ ಸ್ವಾಗತಿಸಿ, ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಶ್ರೀ ಮಠದ ಸಕಲ ಬಿರುದುಬಾವಲಿಗಳೊಂದಿಗೆ ರಥಬೀದಿಗೆ ಕರೆತರಲಾಗುವುದು. ಸಂಜೆ 6:45ಕ್ಕೆ ಅವರು ಶ್ರೀಕೃಷ್ಣಮಠ ಪ್ರವೇಶಿಸಲಿರುವ ಶ್ರೀಗಳಿಗೆ ಉಡುಪಿ ನಗರಸಭೆ ಹಾಗೂ ಸ್ವಾಗತ ಸಮಿತಿಯ ಜಂಟಿ ಸಹಯೋಗದಲ್ಲಿ ಪೌರಸಮ್ಮಾನ ನೀಡಲಾಗುವುದು ಎಂದು ಅವರು ವಿವರಿಸಿದರು.

ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ರಘುಪತಿ ಭಟ್ ಮಾತನಾಡಿ ಪೌರಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಯಾಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಉಪಸ್ಥಿತರಿರುವರು ಎಂದರು.

ರಥಬೀದಿಯಲ್ಲಿ ಪೇಜಾವರ ಮಠದ ಮುಂಭಾಗದಲ್ಲಿ ನಿರ್ಮಿಸಲಾಗುವ ಆನಂದ ತೀರ್ಥ ಮಂಟಪದಲ್ಲಿ ಡಿ.8ರಿಂದ 17ರವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳು ಸಂಜೆ 4:00ರಿಂದ ರಾತ್ರಿ 10ಗಂಟೆಯವರೆಗೆ ನಡೆಯುತ್ತವೆ.

ಅಲ್ಲದೇ ಜ.9ರಿಂದ 17ರವರೆಗೆ ಪ್ರತಿದಿನ ವಿವಿಧ ಗ್ರಾಮಗಳು, ಸಂಘಸಂಸ್ಥೆಗಳು, ಸಹಕಾರಿಗಳು, ಸಂಘಟನೆಗಳ ವತಿಯಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬರಲಿವೆ. ರಾಜಾಂಗಣದ ಪಾರ್ಕಿಂಗ್ ಪ್ರದೇಶ ದಲ್ಲಿ ನಿರ್ಮಿಸ ಲಾಗುವ ಕನಕದಾನ ಮಂಟಪದಲ್ಲೂ ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ರಾಜಾಂಗಣದ ಉಪೇಂದ್ರ ತೀರ್ಥ ವೇದಿಕೆಯಲ್ಲಿ ಪರ್ಯಾಯ ದರ್ಬಾರ್ ಬಳಿಕ ಜ.18ರಿಂದ 24ರವರೆಗೆ ಪ್ರತಿದಿನ ಸಂಜೆ ಪ್ರಮುಖ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ ಎಂದು ರಘುಪತಿ ಭಟ್ ತಿಳಿಸಿದರು.

ಜ.18ರಂದು ನಡೆಯುವ ಪರ್ಯಾಯ ದರ್ಬಾರ್‌ನಲ್ಲಿ ರಾಜ್ಯದ ಹಾಗೂ ರಾಜ್ಯದ ಗಣ್ಯರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಜೆ ದರ್ಬಾರ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.

ಇದೇ ಮೊದಲ ಬಾರಿ ಎಲ್ಲಾ ಸಮುದಾಯಗಳ ಮುಖಂಡರೊಂದಿಗೆ ಮಾತುಕತೆ ಸ್ವಾಗತ ಸಮಿತಿ ಸಭೆ ನಡೆಸಿದ್ದು, ಎಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪುರಮೆರವಣಿಗೆಯಲ್ಲಿ ಬಿರುದಾವಳಿಗಳು, ಟ್ಯಾಬ್ಲೊ, ಜಾನಪದ ತಂಡಗಳು ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ರಮೇಶ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News