×
Ad

ಕುಂದಾಪುರ: ಡಿ.9ರಿಂದ 10ನೇ ವರ್ಷದ ಕಾರ್ಟೂನು ಹಬ್ಬ!

Update: 2023-12-07 18:58 IST

ಉಡುಪಿ, ಡಿ.7: ಕಾರ್ಟೂನು ಹಬ್ಬ ಬಳಗ ಕುಂದಾಪುರ ಇವರ ನೇತೃತ್ವದಲ್ಲಿ 10ನೆಯ ವರ್ಷದ ಕಾರ್ಟೂನು ಹಬ್ಬ ಈ ಬಾರಿ ಡಿಸೆಂಬರ್ 9ರಿಂದ 12ರವರೆಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ.

ಪ್ರತಿವರ್ಷ ಹಲವು ವಿಶಿಷ್ಟತೆಗಳೊಂದಿಗೆ ನಡೆಯುವ ಕಾರ್ಟೂನ್ ಹಬ್ಬ ಈ ಬಾರಿ ಡಿ.9ರ ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ಗೊಳ್ಳಲಿದೆ. ಸತತ ನಾಲ್ಕು ದಿನಗಳ ಕಾಲ ಕುಂದಾಪುರದ ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ, ಜಿ.ಬಿ ಕಲೈಕಾರ್, ರವಿರಾಜ ಹಾಲಂಬಿ ಮುಂತಾದವರ ಆಯ್ದ, ಪ್ರಕಟಿತ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಸ್ಥಳದಲ್ಲೇ ವ್ಯಂಗ್ಯ ಭಾವಚಿತ್ರ ರಚನೆಯೂ ನಡೆಯಲಿದೆ.

ಕಾರ್ಟೂನು ಹಬ್ಬವನ್ನು ಖ್ಯಾತ ಕವಿ, ವ್ಯಂಗ್ಯಚಿತ್ರಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿಯೂ ಆಗಿರುವ ಡಾ. ಕುಂ. ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗೆ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಹೋರಾಟಗಾರ, ರಾಜ್ಯ ಡಿವೈಎಫ್‌ಐ ಘಟಕದ ಅಧ್ಯಕ್ಷರು ಆದ ಮುನೀರ್ ಕಾಟಿಪಳ್ಳ, ಜನಪರ ಲೇಖಕರು ಹಾಗೂ ಖ್ಯಾತ ಪತ್ರಕರ್ತ ನವೀನ್ ಸೂರಿಂಜೆ, ನ್ಯೂಸ್ ಮಿನಿಟ್‌ನ ವರದಿಗಾರ ಪ್ರಜ್ವಲ್ ಭಟ್ ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಇತ್ತೀಚೆಗೆ ನಿಧನರಾದ ಪತ್ರಕರ್ತ, ಸಾಹಿತಿ ಡಾ. ಶೇಖರ ಅಜೆಕಾರು ಸ್ಮರಣಾರ್ಥ ‘ನುಡಿನಮನ’ ಮತ್ತು ಮೃತರ ಮಕ್ಕಳ ವಿಧ್ಯಾಭ್ಯಾಸದ ನೆರವಿಗಾಗಿ ಹಣ ಸಂಗ್ರಹಣೆಯ ಭಾಗವಾಗಿ ದಾನಿಗಳ ಕ್ಯಾರಿಕೇಚರ್ ರಚಿಸುವ ಭಾಗವಾಗಿ ’ಚಿತ್ರನಿಧಿ’ ಉದ್ಘಾಟನೆಗೊಳ್ಳಲಿದೆ. ಇದನ್ನು ಉದ್ಯಮಿ ಶಶಿಧರ ಚೌಟ ಉದ್ಘಾಟಿಸುವರು. ನುಡಿನಮನ ಕಾರ್ಯಕ್ರಮದಲ್ಲಿ ಕುಂದಾಪುರದ ಹಿರಿಯ, ಖ್ಯಾತ ಪತ್ರಕರ್ತರಾದ ಯು.ಎಸ್ ಶೆಣೈ, ವಾರ್ತಾಭಾರತಿ ಪತ್ರಿಕೆಯ ಬಿ.ಎಂ ಬಶೀರ್, ಕ್ರೀಡಾ ಪತ್ರಕರ್ತ ಸೋಮಶೇಖರ ಪಡುಕೆರೆ, ಕುಂದಾಪ್ರ ಡಾಟ್ ಕಾಂನ ಸುನಿಲ್ ಬೈಂದೂರು ಭಾಗವಹಿಸಲಿದ್ದಾರೆ.

ಡಿ.9ರಂದು ಅಪರಾಹ್ನ 2 ಗಂಟೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಕಾರ್ಟೂನು ರಚನಾ ಸ್ಪರ್ಧೆ ನಡೆಯಲಿದೆ. ಮರುದಿನ ಡಿ.10ರಂದು ಬೆಳಗ್ಗೆೆ 10:30ಕ್ಕೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಲೈವ್ ಎಡಿಟೋರಿಯಲ್ ಕಾರ್ಟೂನು ರಚನೆ ಹಾಗೂ ಸಂವಾದದ ‘ಮಾಸ್ಟರ್ ಸ್ಟ್ರೋಕ್ಸ್’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಸೌತ್ ಫಸ್ಟ್‌ನ ಕಾರ್ಯಕಾರಣಿ ಸಂಪಾದಕಿ ಅನುಷಾ ರವಿ ಸೂದ್ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಬ್ಯುಸಿನೆಸ್ ಇಂಡಿಯಾದ ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಹಾಗೂ ವೃತ್ತಿಪರ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಉಪಸ್ಥಿತರಿರಲಿದ್ದಾರೆ.

ಈ ಸಂದರ್ಭ ಆನ್‌ಲೈನ್ ಮೂಲಕ ‘ಟೈಮ್ಸ್ ಆಫ್ ಇಂಡಿಯಾ’ದ ವ್ಯಂಗ್ಯಚಿತ್ರಕಾರ ಸಂದೀಪ್ ಅದ್ವರ್ಯು, ‘ಡೆಕ್ಕನ್ ಹೆರಾಲ್ಡ್’ನ ವ್ಯಂಗ್ಯಚಿತ್ರಕಾರ ಸಾಜಿತ್ ಕುಮಾರ್, ‘ದೈನಿಕ್ ಭಾಸ್ಕರ್’ ವ್ಯಂಗ್ಯಚಿತ್ರಕಾರ ಇಸ್ಮಾಯಿಲ್ ಲಹರಿ ಜೊತೆಗೂಡಲಿದ್ದಾರೆ. ಕನ್ನಡದ ಹಿರಿಯ ವ್ಯಂಗ್ಯಚಿತ್ರಕಾರ ರಾದ ಗುಜ್ಜಾರಪ್ಪ, ನಂಜುಡಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಸಂಜೆ 5 ಗಂಟೆಗೆ ಕಾರ್ಟೂನು ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಉಡುಪಿಯ ಖ್ಯಾತ ಮನೋವೈದ್ಯ ಪಿ.ವಿ ಭಂಡಾರಿ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ. ಕೆ. ಪ್ರೇಮಾನಂದ, ಕುಂದಾಪುರ ಕಲಾಕ್ಷೇತ್ರದ ರೂವಾರಿ ಕಿಶೋರ್ ಕುಮಾರ್, ಕದಿಕೆ ಟ್ರಸ್ಟ್ ಸ್ಥಾಪಕಿ ಮಮತಾ ರೈ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ, ಚಿತ್ರ ಕಲಾವಿದ, ಹಿರಿಯ ಶಿಕ್ಷಕ ಉದಯ ಗಾಂವಕರ್, ಸಾಂಸ್ಕೃತಿಕ ಸಂಘಟನೆಯಾದ ಕಲಾಕ್ಷೇತ್ರ ಕುಂದಾಪುರ, ಖ್ಯಾತ ಹುಲಿವೇಷ ಕಲಾವಿದ ಲಕ್ಷ್ಮಣ ಇವರಿಗೆ ಸನ್ಮಾನ ನಡೆಯಲಿದೆ.

ಡಿ.11 ಮತ್ತು 12ರಂದು ಕುಂದಾಪುರ ಪರಿಸರದ ವಿವಿಧ ಶಾಲೆಗಳ ಆಯ್ದ ಕಾರ್ಟೂನಾಸಕ್ತ ವಿದ್ಯಾರ್ಥಿಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಟೂನ್ ಹಬ್ಬದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News