×
Ad

ಉಡುಪಿ: 9 ಮನೆ, 4 ಕೊಟ್ಟಿಗೆ, ತೋಟಗಾರಿಕಾ ಬೆಳೆಗಳಿಗೆ ಹಾನಿ

Update: 2025-07-29 20:02 IST

ಉಡುಪಿ, ಜು.29: ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿ ರುವ ಮಳೆಯ ಬಿರುಸು ಇನ್ನಷ್ಟು ತಗ್ಗಿದೆ. ಆದರೆ ಜಿಲ್ಲೆಯಲ್ಲಿ ಇಂದೂ 9 ಮನೆಗಳಿಗೆ ಹಾನಿ, ತೋಟಗಾರಿಕಾ ಬೆಳೆ ಹಾನಿಯ ನಾಲ್ಕು ಪ್ರಕರಣ ಹಾಗೂ ಜಾನುವಾರು ಕೊಟ್ಟಿಗೆ ಹಾನಿಯ ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಯಾಗಿ ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಶೋಭಾ ಶೆಟ್ಟಿ ಎಂಬವರ ಮನೆಯ ದನ, ಗಾಳಿ-ಮಳೆಯಿಂದ ಮೃತಪಟ್ಟಿರುವುದಾಗಿ ಬೈಂದೂರು ತಹಶೀಲ್ದಾರರ ಕಚೇರಿಯ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ರವಿವಾರ ಹಾಗೂ ಸೋಮವಾರ ಬೀಸಿದ ಗಾಳಿ-ಮಳೆಗೆ ಕುಂದಾಪುರ ತಾಲೂಕಿನಿಂದ ಅತ್ಯಧಿಕ ಹಾನಿಯ ಪ್ರಕರಣ ವರದಿಯಾಗಿದೆ. ಬಸ್ರೂರು ಗ್ರಾಮದ ವರ್ಷ ಶೆಟ್ಟಿ ಹಾಗೂ ಶರ್ಮಿಳಾ ಶೆಟ್ಟಿ ಇವರ ಮನೆಯ ತೋಟದ ಅಡಿಕೆ ಹಾಗೂ ಇತರ ಮರಗಳು ಉರುಳಿದ್ದು 50ಸಾವಿರಕ್ಕೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಅದೇ ರೀತಿ ಹೊಸಂಗಡಿ ಗ್ರಾಮದ ರಾಮ ಗೊಲ್ಲ ಹಾಗೂ ಆಲೂರು ಗ್ರಾಮದ ಸುಚಿತ್ರ ಆರ್. ದೇವಾಡಿಗ ಇವರ ತೋಟದ ಮರಗಳೂ ನೆಲಕ್ಕುರುಳಿವೆ. ಇದರಿಂದ ಅಪಾರ ಹಾನಿ ಸಂಭವಿಸಿದ್ದು, 50ಸಾವಿರಕ್ಕೂ ಅಧಿಕ ನಷ್ಟವಾಗಿರುವುದಾಗಿ ಸಂಬಂಧಿತ ವಿಎ ವರದಿ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಗ್ರಾಮದ ಪರಶುರಾಮ, ಕುಳಂಜೆ ಗ್ರಾಮದ ಕೃಷ್ಣ ನಾಯ್ಕ, ಬೈಂದೂರು ತಾಲೂಕು ಮರವಂತೆಯ ಪದ್ದು ಹಾಗೂ ಪಡುವರಿ ಗ್ರಾಮದ ಸರ್ವೇಶ್ರಿ ಪೂಜಾರಿ ಇವರ ಮನೆಯ ದನದ ಕೊಟ್ಟಿಗೆಗೆ ಹಾನಿಯಾಗಿದ್ದು,40 ಸಾವಿರದಷ್ಟು ನಷ್ಟವಾಗಿರುವುದಾಗಿ ಗೊತ್ತಾಗಿದೆ.

ದಿನದಲ್ಲಿ ವರದಿಯಾದ 9 ಮನೆ ಹಾನಿ ಪ್ರಕರಣಗಳಲ್ಲಿ ಐದು ಕುಂದಾಪುರ ತಾಲೂಕಿನ ವಿವಿದೆಡೆಗಳಿಂದ ಬಂದಿದ್ದರೆ, ಬೈಂದೂರು ಮತ್ತು ಕಾಪು ತಾಲೂಕಿನಿಂದ ತಲಾ ಎರಡು ಪ್ರಕರಣಗಳು ವರದಿಯಾಗಿವೆ.

ಕುಂದಾಪುರ ತಾಲೂಕು ಸಿದ್ಧಾಪುರದ ರವೀಂದ್ರನಾಥ ಉಡುಪರ ಮನೆಗೆ 60ಸಾವಿರ, ಹಟ್ಟಿಯಂಗಡಿ ಗ್ರಾಮದ ಚಂದ್ರಯ್ಯ ಆಚಾರಿ ಮನೆಗೆ 20ಸಾವಿರ, ವಡೇರಹೋಬಳಿಯ ಮ್ಯಾಕ್ಸಿಮ್ ಡಿಸೋಜರ ಮನೆಗೆ 70 ಸಾವಿರ ಹಾಗೂ ಕೊಡ್ಲಾಡಿಯ ಬಸವ ಹರಿಜನ ಮನೆಗೆ 20ಸಾವಿರ ರೂ. ನಷ್ಟವಾಗಿದೆ.

ಕಾಪು ತಾಲೂಕು ಹೆಜಮಾಡಿ ಗ್ರಾಮದ ರಮ್ಯಾ ಮನೆಗೆ 15 ಸಾವಿರ, ಕೋಟೆ ಗ್ರಾಮದ ಜಯಂತಿ ಪೂಜಾರ್ತಿ ಎಂಬವರ ಮನೆಗೆ 20ಸಾವಿರ, ಬೈಂದೂರು ತಾಲೂಕು ಮರವಂತೆ ಗ್ರಾಮದ ಗುಂಡು ಮನೆಗೆ ಒಂದು ಲಕ್ಷ ರೂ. ಹಾಗೂ ನಾವುಂದ ಗ್ರಾಮದ ಸಂಜೀವ ಗಾಣಿಗರ ಮನೆಗೆ 45ಸಾವಿರ ನಷ್ಟ ಸಂಭವಿಸಿದೆ.

ಹವಾಮಾನ ಮುನ್ಸೂಚನೆಯಂತೆ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ. ಆಗಾಗ ಗಾಳಿ ಬೀಸುವ ಸಾಧ್ಯತೆಯೂ ಇರುತ್ತದೆ.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News