×
Ad

ಜ.14ರಂದು ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ; ವಾರ್ಷಿಕೋತ್ಸವ

Update: 2024-01-09 18:44 IST

ಕುಂದಾಪುರ: ‘ಒಂದೇ ಜಾತಿ, ಒಂದೇ ಮತ ಮತ್ತು ಒಂದೇ ದೇವರು’ ಎಂಬ ಆದರ್ಶದಡಿ ‘ವಿಶ್ವ ಶಾಂತಿ’ ಸಂದೇಶ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮ ಗಳೊಂದಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವವನ್ನು ಜ.14ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರೊ.ಹಯವದನ ಉಪಾಧ್ಯಾಯ ತಿಳಿಸಿದ್ದಾರೆ.

ಕುಂದಾಪುರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ವೇಳೆ ನೂತನವಾಗಿ ನಿರ್ಮಾಣಗೊಂಡ ’ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್’ ಉದ್ಘಾಟನೆಗೊಳ್ಳಲಿದೆ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಲಾಂಛನ ಅನಾವರಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾಗವಹಿಸಲಿರು ವರು. ಪರಿಸರವಾದಿ ಪದ್ಮಶ್ರೀ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಎಂ.ಇ.ಐ.ಎಫ್ ಅಧ್ಯಕ್ಷ ಮೂಸಬ್ಬ. ಪಿ.ಬ್ಯಾರಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮನ್ ಮಾತನಾಡಿ, ಸ್ವಾತಂತ್ರ್ಯ ಪೂರ್ವ 1906ರಲ್ಲಿ ಶಿಕ್ಷಣದ ಮೊಳಕೆ ಎಂಬಂತೆ ಕೋಡಿಯಲ್ಲಿ ಸಣ್ಣ ಶಾಲೆಯೊಂದು ಹುಲ್ಲಿನ ಹೊದಿಕೆಯಿಂದ ಕೂಡಿದ ಚಪ್ಪರದಡಿಯಲ್ಲಿ ಅಕ್ಷರ ಪ್ರಪಂಚವನ್ನು ಪರಿಚಯಿಸಿತು. ಕೀರ್ತಿ ಶೇಷರಾದ ದಿವಂಗತ ಹಾಜಿ ಮಾಸ್ಟರ್ ಮಹಮೂದ್ ಅಧ್ಯಕ್ಷತೆಯಲ್ಲಿ ವಿವಿಧ ಅಂಗ ಸಂಸ್ಥೆಗಳು ಊರ ಪರವೂರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟ ಆತ್ಮತೃಪ್ತಿಯಿದೆ ಎಂದರು.

ಪ್ರಸ್ತುತ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅವರ ನೇತೃತ್ವದಲ್ಲಿ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಅವರ ಮಾರ್ಗದರ್ಶನ ದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಅತ್ಯುತ್ತಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಪರಿಸರಮುಖಿ, ಸಮಾಜಮುಖಿ ಚಿಂತನೆಯೊಂದಿಗೆ ಪ್ರತಿ ತಿಂಗಳು ನಡೆಸುತ್ತಿರುವ ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು 28 ಹಂತವನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಬ್ಯಾರೀಸ್ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಸಂಸ್ಥೆಯ ಬಿ.ಎಡ್ ವಿಭಾಗದ ಪ್ರಾಂಶುಪಾಲ ಸಿದ್ದಪ್ಪಉಪಸ್ಥಿತರಿದ್ದರು. 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News