×
Ad

ಜೂ.15ರಿಂದ ರಾಜಾಂಗಣದಲ್ಲಿ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ

Update: 2025-06-13 21:47 IST

ಉಡುಪಿ, ಜೂ.13: ಪರ್ಯಾಯ ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಕರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮ ಜೂ.15ರಿಂದ ಜೂ.21ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ನಡೆಯಲಿದೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯ ಡಾ.ಸುನಿಲ್ ಉಡುಪ ಮುಂಡ್ಕೂರು ಮಾತನಾಡಿ, ಜೂ.15ರಂದು ಸಂಜೆ 5:30ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಸಪ್ತಾಹವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ಕಾಸರಗೋಡು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಅವರು ಉಪಸ್ಥಿತರಿರುವರು ಎಂದರು.

ಹಿರಿಯ ಯಕ್ಷಗಾನ ಕಲಾವಿದರಾದ ಕೆ.ಗೋವಿಂದ ಭಟ್, ಪ್ರೊ.ಎಂ.ಎಲ್. ಸಾಮಗ, ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಹಿರಿಯ ಯಕ್ಷಗಾನ ಹಿಮ್ಮೇಳ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಇವರನ್ನು ಸನ್ಮಾನಿಸಲಾಗುವುದು ಎಂದರು.

15ರಂದು ಅಪರಾಹ್ನ 2:30ಕ್ಕೆ ಅಷ್ಟಾವಧಾನಿ ಡಾ.ರಾಮಕೃಷ್ಣ ಪೆಜತ್ತಾಯ ಬಾಳ ಅವರಿಂದ ಕನ್ನಡ-ಸಂಸ್ಕೃತ ಅಷ್ಟಾವ ಧಾನ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ರಾತ್ರಿ 7 ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಲಿದೆ. ಜೂ.15ರಂದು ’ತಾಮ್ರಧ್ವಜ ಕಾಳಗ’, 16ರಂದು ಅಮೆರಿಕದ ಸಿದ್ಧಿ ಜಯದೇವ್ ತಂತ್ರಿ ಇವರಿಂದ ಭರತನಾಟ್ಯದ ಬಳಿಕ ಯಕ್ಷಗಾನ ಕರ್ಣಪರ್ವ ನಡೆಯಲಿದೆ.

ಜೂ.17ರಂದು ’ಗಧಾ ಪರ್ವ’, ಜೂ.18ರಂದು ’ಮನ್ಮಥೋಪಖ್ಯಾನ’, ಜೂ.19ರಂದು ‘ಭಾರ್ಗವ ವಿಜಯ’, ಜೂ.20ಕ್ಕೆ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜೂ.21ರಂದು ರಾತ್ರಿ 7 ಗಂಟೆಗೆ ಸಮಾರೋಪ ನಡೆಯಲಿದೆ. ಹಿರಿಯ ಅರ್ಥಧಾರಿ ಪೊಳಲಿ ನಿತ್ಯಾನಂದ ಕಾರಂತ್, ಪ್ರಸಾದನ ತಜ್ಞ ಪಿ.ವಿ.ಪರಮೇಶ್, ಯಕ್ಷಗುರು ರಾಕೇಶ್ ರೈ ಅಡ್ಡ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆ ವಿದ್ಯಾರ್ಥಿಗಳಿಂದ ‘ಗಿರಿಜಾ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಡಾ.ಸುನಿಲ್ ಉಡುಪ ತಿಳಿಸಿದರು.

ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ ಸೋದೆ ಮಠದ ಆವರಣದಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತೆಂಕುತಿಟ್ಟು ಯಕ್ಷಗಾನ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ. ಪ್ರತಿ ಬುಧವಾರ ಸಂಜೆ 5:30ರಿಂದ ರಾತ್ರಿ 7:30ರವರೆಗೆ ಈ ತರಬೇತಿ ನಡೆಯುತ್ತದೆ. ಈ ವರ್ಷ ದಿಂದ ಪ್ರತಿ ಶನಿವಾರ ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ತೆಂಕುತಿಟ್ಟು ಚೆಂಡೆ ಮತ್ತು ಮದ್ದಳೆ ತರಗತಿಯನ್ನು ಆರಂಭಿಸುತ್ತೇವೆ. ಹಿರಿಯ ಹಿಮ್ಮೇಳ ಕಲಾವಿದ ಕಟೀಲು ಮುರಳೀಧರ ಭಟ್ ತರಬೇತಿ ನೀಡಲಿದ್ದಾರೆ. ಮುಂದೆ ಯಕ್ಷಗಾನ ಭಾಗವತಿಕೆ, ಮಾತುಗಾರಿಕೆ ತರಬೇತಿ ಆರಂಭಿಸುವ ಆಲೋಚನೆ ಇದೆ ಎಂದು ಪ್ರತಿಷ್ಠಾನದ ಸದಸ್ಯ ಮೋಹನ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಗೋಪಿಕಾ ಮಯ್ಯ, ಸತೀಶ್ ಮಯ್ಯ, ಯಕ್ಷಗುರು ರಾಕೇಶ್ ರೈ ಅಡ್ಕ ಸದಸ್ಯರಾದ ನಿರಂಜನ್ ಭಟ್, ರವಿನಂದನ್ ಭಟ್, ಸ್ನೇಹಾ ಆಚಾರ್ಯ ಹಾಗೂ ಶಶಿಕಾಂತ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News