×
Ad

ಜ.17ರಂದು ಬಾಲರಾಮ ವಿಗ್ರಹದ ಘೋಷಣೆ: ಪೇಜಾವರಶ್ರೀ

Update: 2024-01-03 21:09 IST

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಬಾಲರಾಮನ ವಿಗ್ರಹ ಯಾವುದೆಂದೂ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಅದರ ಘೋಷಣೆ ಜ.17ರಂದು ನಡೆಯಲಿದೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಈಗಾಗಲೇ ಟ್ರಸ್ಟಿಗಳಾದ ನಾವೆಲ್ಲರೂ ಮತ ಹಾಕಿದ್ದೇವೆ. ಎಲ್ಲವನ್ನೂ ಪರಿಶೀಲಿಸಿದ ಬಳಿ ಅಂತಿಮ ನಿರ್ಧಾರವಾಗಲಿದೆ. ಸರಯೂ ನದಿಯ ಅಭಿಷೇಕದ ದಿನ ಮೂರ್ತಿ ಯಾವುದೆಂದು ಬಹಿರಂಗವಾಗಲಿದೆ ಎಂದರು.

ಈಗಾಗಲೇ ಅಂತಿಮ ಸುತ್ತಿಗೆ ಬಂದಿರುವ ಮೂರು ಮೂರ್ತಿಗಳೂ ಸುಂದರವಾಗಿವೆ. ಎರಡು ಕರಿ ಹಾಗೂ ಒಂದು ಅಮೃತಶಿಲೆ ಮೂರ್ತಿ ನಿರ್ಮಾಣಗೊಂಡಿವೆ ಎಂದು ಅವರು ವಿವರಿಸಿದರು.

ರಾಮಮಂದಿರ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲದ ಕುರಿತು ಮಾತನಾಡಿದ ಸ್ವಾಮೀಜಿ, ಈ ಕಾರ್ಯಕ್ರಮಕ್ಕೆ ದೇಶದ ಎಲ್ಲರೂ ಆಹ್ವಾನಿತರೇ. ದೇಶದಲ್ಲಿ ರಾಮನ ಭಕ್ತರು, ಸಂತರು, ಮಹಂತರು ಬಹಳ ಮಂದಿ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು, ಭಕ್ತರೆಲ್ಲ ಆಮಂತ್ರಿತರೇ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟು ಕೊಂಡು ಆಯ್ಕೆ ಮಾಡಲಾಗಿದೆ. ಸೀಮಿತ ಸ್ಥಳಾವಕಾಶದ ಕಾರಣ ಎಲ್ಲರೂ ಭಾಗಿಯಾಗೋದು ಕಷ್ಟ. ಪ್ರತಿಷ್ಟಾಪನೆ ನಂತರ ಕೋಟ್ಯಾಂತರ ಭಕ್ತರು ಬಾಲರಾಮನ ದರ್ಶನಕ್ಕೆ ಅವಕಾಶ ಇದೆ ಎಂದು ಸ್ವಾಮೀಜಿ ನುಡಿದರು.

ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ ಮಂದಿರ ಎಂದಿರುವ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪೇಜಾವರಶ್ರೀಗಳು, ರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ ಎಲ್ಲರೊಳಗೂ ಇದ್ದಾನೆ. ಸಿದ್ದರಾಮಯ್ಯನೊಳಗೂ ದೇವರು ಇದ್ದಾನೆ. ಅದನ್ನು ಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ನಾವು ಭಾರತೀಯರು, ಈ ಮಂದಿರ ಎಲ್ಲರದ್ದೂ ಅಂದು ಕೊಳ್ಳೋಣ ಎಂದರು.

ಹುಬ್ಬಳ್ಳಿ ಕರಸೇವಕರ ವಿರುದ್ಧದ ಮೊಕದ್ದಮೆಯನ್ನು ಮತ್ತೆ ತೆರೆದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರ ಸೇವಕರ ಬಂಧನ ಮಾಡಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನವೆಂದು ನಾವು ಭಾವಿಸುತ್ತೇವೆ ಎಂದರು.

ಜ.22ರಂದು ಪ್ರತಿಷ್ಠೆಯ ದಿನದಂದು ಸಾರ್ವತ್ರಿಕ ರಜಾ ಘೋಷಣೆಯ ಬಗ್ಗೆ ಬಂದಿರುವ ಬೇಡಿಕೆ ಕುರಿತು ಪ್ರಶ್ನಿಸಿದಾಗ, ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರು ಇದ್ದಾರೆ. ಎಲ್ಲರ ಭಾವನೆಗಳಿಗೆ ಮನ್ನಿಸಿ, ಗೌರವಿಸಿ ರಜೆ ಘೋಷಿಸಿ ಎಂದು ನಾನು ಆಗ್ರಹಿಸುತ್ತೇನೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News