ಫೆ.2ರಂದು ʼನಕ್ಸಲ್ʼ ತೊಂಬಟ್ಟು ಲಕ್ಷ್ಮೀ ಉಡುಪಿಯಲ್ಲಿ ಶರಣಾಗತಿ ?
ತೊಂಬಟ್ಟು ಲಕ್ಷ್ಮೀ
ಉಡುಪಿ, ಫೆ.1: ಕಳೆದ ಏಳೆಂಟು ವರ್ಷಗಳಿಂದ ಕರಾವಳಿ-ಮಲೆನಾಡು ಭಾಗದ ನಕ್ಸಲ್ ಚಟುವಟಿಕೆಗಳಿಂದ ಹಠಾತ್ತನೆ ನಾಪತ್ತೆಯಾಗಿ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದರೆಂದು ಹೇಳಲಾಗುತಿದ್ದ ಕುಂದಾಪುರ ತಾಲೂಕು ಅಮಾಸೆಬೈಲು ಸಮೀಪದ ತೊಂಬಟ್ಟಿನ ಲಕ್ಷ್ಮೀ ಇದೀಗ ಧುತ್ತನೆ ಕಾಣಿಸಿಕೊಂಡಿದ್ದು, ಅವರು ಫೆ.2ರಂದು ಬೆಳಗ್ಗೆ ಉಡುಪಿಯಲ್ಲಿ ಜಿಲ್ಲಾಡಳಿತದ ಎದುರು ಶರಣಾಗತರಾಗಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ಇಂದು ಶರಣಾಗತರಾದ ಕರ್ನಾಟಕದ ಕೊನೆಯ ಭೂಗತ ನಕ್ಸಲ್ ಎನ್ನಲಾದ ಕೋಟೆಹೊಂಡ ರವೀಂದ್ರ ಅವರ ಶರಣಾಗತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಾಟ್ಸಪ್ ಗ್ರೂಪ್‌ನಲ್ಲಿ ಬಂದ ಪೋಸ್ಟ್ ಒಂದರಲ್ಲಿ ಈವರೆಗೆ ನಾಪತ್ತೆಯಾಗಿದ್ದ ನಕ್ಸಲ್ ತೊಂಬಟ್ಟು ಲಕ್ಷ್ಮೀ ಅವರೂ ಫೆ.2ರಂದು ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗತರಾಗಲಿದ್ದಾರೆ ಎಂಬ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯದ ನಕ್ಸಲ್ ಭೂಪಟದಲ್ಲಿ ನಾಪತ್ತೆಯಾಗಿದ್ದ ತೊಂಬಟ್ಟು ಲಕ್ಷ್ಮೀ ಅವರ ಹೆಸರು ಮತ್ತೆ ಬಹಿರಂಗ ವಾಗಿ ಕಾಣಿಸಿಕೊಳ್ಳು ವಂತಾಗಿದೆ. ಸುಮಾರು ದಶಕದ ಹಿಂದೆ ಸಹ ನಕ್ಸಲ್ ‘ಸಂಜೀವ’ ಎಂಬವರನ್ನು ಮದುವೆಯಾಗಿದ್ದ ಲಕ್ಷ್ಮೀ ಆಂದ್ರಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಬದುಕು ಕಟ್ಟಿಕೊಂಡಿದ್ದರೆಂದು ಆಕೆಯ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ತಿಳಿಸಿದ್ದರು.
ಬಳಿಕ ‘ಸಂಜೀವ’ ಆಂಧ್ರದ ಪೊಲೀಸರಿಗೆ ಶರಣಾಗಿದ್ದರು ಎಂದು ಹೇಳಲಾಗುತಿದ್ದರೂ, ಲಕ್ಷ್ಮೀ ಕುರಿತಂತೆ ಯಾವುದೇ ಮಾಹಿತಿ ಬಂದಿರಲಿಲ್ಲ. ಇದೀಗ ಮುಖ್ಯಮಂತ್ರಿಗಳ ವಾಟ್ಸಪ್ ಗ್ರೂಪ್‌ನಲ್ಲಿ ಬಂದಿರುವ ಮಾಹಿತಿ ಯಂತೆ ತೊಂಬಟ್ಟು ಲಕ್ಷ್ಮೀ ಜಿಲ್ಲಾಡಳಿದ ಮುಂದೆ ಶರಣಾಗಲು ಆಂದ್ರ ಪ್ರದೇಶದಿಂದ ಆಗಮಿಸುತಿದ್ದಾರೆ. ಲಕ್ಷ್ಮೀ ಅವರ ಈ ಹಠಾತ್ತ್ ನಿರ್ಧಾರಕ್ಕೆ ಕಾರಣಗಳೇನು ಎಂಬ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ಹೊರಬಂದಿಲ್ಲ.
ಇಂದು ಚಿಕ್ಕಮಗಳೂರಿನಲ್ಲಿ ಕೋಟೆಹೊಂಡ ರವೀಂದ್ರ ಅವರ ಶರಣಾಗತಿ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ‘ತೊಂಬಟ್ಟು ಲಕ್ಷ್ಮೀ ಅವರು ಉಡುಪಿಯಲ್ಲಿ ಜಿಲ್ಲಾಡಳಿತದ ಮುಂದೆ ಶರಣಾಗತರಾಗಲಿದ್ದಾರೆ’ ಎಂದು ತಿಳಿಸಿದ್ದರು.
ತೊಂಬಟ್ಟು ಲಕ್ಷ್ಮೀ ಅವರ ಶರಣಾಗತಿಯ ಕುರಿತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಹಾಗೂ ಪೊಲೀಸರೇ ನೇರವಾಗಿ ಕಾರ್ಯಾಚರಣೆ ನಡೆಸುತಿದ್ದಾರೆ. ಫೆ.2ರಂದು ಬೆಳಗ್ಗೆ ಉಡುಪಿಯಲ್ಲಿ ಅವರು ಜಿಲ್ಲಾಡಳಿತದ ಮುಂದೆ ಶರಣಾಗುತ್ತಾರೆ ಎಂದು ಬಲ್ಲಮೂಲಗಳು ತಮಗೆ ಖಚಿತ ಪಡಿಸಿವೆ ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್. ಅಶೋಕ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ
ಉಡುಪಿ ಜಿಲ್ಲೆಗೆ ಸೇರಿದ ಕೊನೆಯ ನಕ್ಸಲ್ ಎನ್ನಲಾದ ತೊಂಬಟ್ಟು ಲಕ್ಷ್ಮೀ ನಾಳೆ ಜಿಲ್ಲಾಡಳಿತ ಮುಂದೆ ಶರಣಾಗತರಾ ಗಲಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತಕ್ಕೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಸುದ್ದಿಯನ್ನು ನೋಡಿರುವುದಾಗಿ ಹೇಳಿರುವ ಅವರು ಶರಣಾಗತಿಯ ಕುರಿತಂತೆ ತಮಗಾಗಲೀ, ಎಸ್ಪಿ ಡಾ.ಅರುಣ್ ಅವರಿಗಾಗಲೀ ಇದುವರೆಗೆ ಸಮಿತಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೊಂಬಟ್ಟುವಿನ ಪಂಜು ಪೂಜಾರಿ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಒಬ್ಬಳಾದ ಲಕ್ಷ್ಮೀ, ಹೈಸ್ಕೂಲ್ ಶಿಕ್ಷಣ ಪಡೆದಿ ದ್ದಳು. ಗ್ರಾಮದಲ್ಲಿ ವಿವಿಧ ಸಾಮಾಜಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತಿದ್ದಳು. ಸಾರಾಯಿ ಅಂಗಡಿ ವಿರುದ್ಧದ ಹೋರಾಟಗಳಲ್ಲೂ ಈಕೆ ಸಕ್ರೀಯಳಾಗಿ ಭಾಗವಹಿಸಿದ್ದು, ಆ ವೇಳೆ ಪಶ್ಚಿಮಘಟ್ಟ ಭಾಗದಲ್ಲಿ ಕಾಣಿಸಿಕೊಂಡ ನಕ್ಸಲ್ ಹೋರಾಟದ ಗುಂಪಿನತ್ತ ಆಕರ್ಷಿತಳಾಗಿ ಅದನ್ನು ಸೇರಿದ್ದಳು ಎಂದು ಹೇಳಲಾಗಿದೆ.
ನಕ್ಸಲಿಸಂನೊಂದಿಗೆ ಗುರುತಿಸಿಕೊಂಡ ಬಳಿಕ ಅಲ್ಲಿ ಸಕ್ರಿಯಳಾಗಿದ್ದ ಆಕೆಯ ಮೇಲೆ ಸದ್ಯ ಉಡುಪಿಯಲ್ಲಿ 3-4 ಕೇಸುಗಳಿವೆ ಎಂದು ಹೇಳಲಾಗುತ್ತಿದೆ. 2008-10ರ ಸುಮಾರಿಗೆ ಆಕೆ ಸಹ ನಕ್ಸಲ್ ಸಂಜೀವ ಎಂಬವನನ್ನು ವಿವಾಹವಾಗಿ ಆಂಧ್ರಕ್ಕೆ ತೆರಳಿದ್ದಳು ಎಂದು ಹೇಳಲಾಗಿದೆ.