×
Ad

ಜು.20: ಕುಂದಾಪುರ ಕಲಾಕ್ಷೇತ್ರದಿಂದ ಗ್ರಾಮೀಣ ಕ್ರೀಡಾ ಸಡಗರ ‘ಲಗೋರಿ’

Update: 2025-07-15 21:32 IST

ಉಡುಪಿ, ಜು.15: ಕಳೆದ 15 ವರ್ಷಗಳಿಂದ ಕುಂದಾಪುರದಲ್ಲಿ ಸಾಂಸ್ಕೃತಿಕ, ಪಾರಂರಿಕ ಕಾರ್ಯಕ್ರಮ ಗಳ ಸಂಘಟನೆ ಮೂಲಕ ಜನಪ್ರೀತಿ ಪಡೆದಿರುವ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೇ ಜು.20ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ‘ಲಗೋರಿ’ ಗ್ರಾಮೀಣ ಕ್ರೀಡಾ ಸಡಗರವನ್ನು ಆಯೋಜಿಸಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಕಿಶೋರ್‌ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕ್ರೀಡೆ ನಡೆಯುತ್ತಿರುವುದನ್ನು ನೋಡಿದ್ದೇವೆ. ಆದರೆ ನಮ್ಮ ಟ್ರಸ್ಟ್ ಕುಂದ್ರಾಪ ಕನ್ನಡ ಭಾಷೆಯ ಹೆಸರಿನಲ್ಲಿ ಕ್ರೀಡೆಯನ್ನು ನಡೆಸುತ್ತಿದೆ ಹಾಗೂ ಈ ಮೂಲಕ ಜಾತಿ-ಧರ್ಮಗಳನ್ನು ಮೀರಿ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತಿದ್ದೇವೆ ಎಂದರು.

ಇದೇ ಜು.20ರ ಕರ್ಕಾಟಕ ಅಮಾವಾಸ್ಯೆ ದಿನ ಎಲ್ಲರೂ ಕುಂದ್ರಾಪ ಕನ್ನಡ ದಿನಾಚರಣೆಯನ್ನು ಆಚರಿಸಿ ದರೆ, ನಮ್ಮ ಟ್ರಸ್ಟ್ ಕಳೆದೆರಡು ವರ್ಷಗಳಿಂದ ಭಾಷೆಯ ಹೆಸರಿನಲ್ಲಿ ‘ಲಗೋರಿ’ ಎಂಬ ಗ್ರಾಮೀಣ ಕ್ರೀಡಾ ಕೂಟವನ್ನು ಆಯೋಜಿಸುತ್ತಿದೆ. ಇಂದಿನ ತಲೆಮಾರು ನೋಡದ, ಆಡದ ಆಟಗಳನ್ನು ಭಾಷಾ ಪ್ರೇಮಿ ಗಳನ್ನು ಒಗ್ಗೂಡಿಸಿ ಆಡುತಿದ್ದು, ಈ ಮೂಲಕ ಜನ ಮರೆತಿರುವ, ತೆರೆಮರೆಗೆ ಸರಿದಿರುವ ಹಲವು ಆಟ ಗಳನ್ನು ಮತ್ತೆ ಮುನ್ನೆಲೆ ತರುವ ಪ್ರಯತ್ನ ಮಾಡಲಿದ್ದೇವೆ ಎಂದರು.

ಗ್ರಾಮೀಣ ಆಟಗಳ ವೈಯಕ್ತಿಕ ವಿಭಾಗದಲ್ಲಿ ಉಪ್ಪುಮುಡಿ, ಗೋಣಿಚೀಲ ಓಟ, ಗೂಟಸುತ್ತಿ ಓಟ, ಸೈಕಲ್ ಟಯರ್ ಓಟ, ಕಂಬಳ, ಚಕ್ರವ್ಯೆಹ, ಗುರಿ ಇಟ್ಟು ಹೊಡೆಯುವುದು, ಮಡಿಕೆ ಒಡೆಯುವುದು ಸೇರಿದ್ದರೆ, ಗುಂಪು ಆಟಗಳಲ್ಲಿ ಲಗೋರಿ, ಚೆಂಡಾನ್ ಚೆಂಡು, ಹಗ್ಗಜಗ್ಗಾಟ, ಚೆನ್ಚೆಂಡು, ಡೊಂಕಾಲು, ಥ್ರೋಬಾಲ್ ಸೇರಿವೆ ಎಂದರು.

ಗುಂಪು ಸ್ಪರ್ಧೆಗಳು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದರೆ, ವೈಯಕ್ತಿಕ ಆಟಗಳು 12 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ, 17 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ವಿಬಾಗಗಳಲ್ಲಿ ನಡೆಯಲಿವೆ. ವಿಜೇತರಿಗೆ ಆಕರ್ಷಕ ನಗದು ಸೇರಿದಂತೆ ವಿವಿಧ ಬಹುಮಾನಗಳಿವೆ. ಸ್ಪರ್ದೆಗಳು ‘ಹಂಬಕ್ ಮಾಡುಕಿಲ್ಲ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬೆಳಗ್ಗೆ 9:00ಗಂಟೆಗೆ ಪ್ರಾರಂಭ ಗೊಳ್ಳಲಿದೆ. ಸಂಜೆ ಬಹುಮಾನ ವಿತರಣೆ ನಡೆಯಲಿದೆ ಎಂದು ಕಿಶೋರ್‌ ಕುಮಾರ್ ಕುಂದಾಪುರ ತಿಳಿಸಿದರು.

ಚೆನ್ನೆಮಣೆ, ಗುಡ್ನ ಹಾಗೂ ಗೋಲಿ ಆಟಗಳು ಪ್ರದರ್ಶನ ಕ್ರೀಡೆಗಳಾಗಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ ಮೊ.ನಂ.: 9844783053, ನೊಂದಣಿಗೆ: 9448172177ನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಾಜೇಶ್ ಕಾವೇರಿ, ಕೆ.ಆರ್.ನಾಯಕ್, ಶ್ರೀಧರ ಸುವರ್ಣ, ರಾಮಚಂದ್ರ ಬಿ.ಎನ್.ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News