ಫೆ.22ರಿಂದ ಶಿವಪಾಡಿ ವೈಭವ ಕಾರ್ಯಕ್ರಮ
ಮಣಿಪಾಲ, ಫೆ.18: ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶಿವಪಾಡಿ ವೈಭವ ಆಚರಣಾ ಸಮಿತಿ ನೇತೃತ್ವದಲ್ಲಿ ಶಿವರಾತ್ರಿಯ ಪ್ರಯುಕ್ತ ಶಿವಪಾಡಿ ವೈಭವವನ್ನು ಫೆ.22ರಿಂದ ಫೆ.26ರವರೆಗೆ ದೇವಳದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ತಿಳಿಸಿದ್ದಾರೆ.
ದೇವಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯ ಕ್ರಮವನ್ನು ಫೆ.22ರಂದು ಸಂಜೆ 4 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು. ಫೆ.22ರಿಂದ 26ರ ವರೆಗೆ ಯಕ್ಷಗಾನ, ಕೃಷಿ, ಆಹಾರ, ಆರೋಗ್ಯ, ಮನೋರಂಜನೆಯ ಮಹಾಮೇಳ ಗಳನ್ನು ಆಯೋಜಿಸಲಾಗಿದೆ ಎಂದರು.
ಫೆ.22ರ ಕೃಷಿ ಮೇಳದಲ್ಲಿ 50 ಮಂದಿ ಕೃಷಿ ಸಾಧಕರನ್ನು ಸನ್ಮಾನಿಸ ಲಾಗುವುದು. ಐದು ದಿನಗಳ ಕೃಷಿ ಮೇಳದಲ್ಲಿ ಪ್ರತಿನಿತ್ಯ ಕೃಷಿ ಗೋಷ್ಠಿ-ವಸ್ತು ಪ್ರದರ್ಶನ ಹಾಗೂ 250 ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಇರಲಿವೆ. ಯಕ್ಷ ಮೇಳದಲ್ಲಿ ಐದು ದಿನ ರಾತ್ರಿ ವಿವಿಧ ಮೇಳಗಳ ಯಕ್ಷಗಾನ ನಡೆಯಲಿದೆ. ಆಹಾರ ಮೇಳದಲ್ಲಿ 250ಕ್ಕೂ ಅಧಿಕ ಶುದ್ಧ ದೇಸಿ ಶಾಖಾಹಾರಿ ಖಾದ್ಯ, ತಿಂಡಿ- ತಿನಿಸುಗಳ ಮಳಿಗೆಗಳು ಇರಲಿವೆ.
ವಿವಿಧ ಆಸ್ಪತ್ರೆಗಳು ಹಾಗೂ ಕುಟುಂಬ ಆರೋಗ್ಯ ಕಲ್ಯಾಣ ಇಲಾಖೆ ಅಡಿಯಲ್ಲಿ ಆರೋಗ್ಯ ಮೇಳ- ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ, ಉಚಿತ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಬಹುಬಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವಳದ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಎಸ್.ದಿನೇಶ್ ಪ್ರಭು, ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್, ಆಡಳಿತ ಮೊಕ್ತೇಸರ ಸುಭಾಕರ ಸಾಮಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಶ್ರೀಧರ ಸಾಮಂತ್, ಟ್ರಸ್ಟಿಗಳಾದ ಪ್ರಕಾಶ್ ಪ್ರಭು, ಅಶೋಕ್ ಸಾಮಂತ, ಸತೀಶ್ ಪಾಟೀಲ್, ಶಿವಪಾಡಿ ವೈಭವ ಆಚರಣ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿ ನಾಗರಾಜ ಕಾಮತ್, ಆರೋಗ್ಯ ಮೇಳದ ಉಸ್ತುವಾರಿ ರೇಷ್ಮಾ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಜುನಾಥ್ ಉಪಸ್ಥಿತರಿದ್ದರು.