ಡಿ.24-25ರಂದು ಅಂಬಲಪಾಡಿ ದೇವಳದಲ್ಲಿ ‘ನೃತ್ಯೋತ್ಕರ್ಷ-2023’
ಸಾಂದರ್ಭಿಕ ಚಿತ್ರ
ಉಡುಪಿ, ಡಿ.20:ಮಂಗಳೂರಿನ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್, ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿಯ ಮೂಲಕ ಆಯೋಜಿಸುವ ಕರಾವಳಿ ಭರತನಾಟ್ಯ ಕರಾವಿದರ ನೃತ್ಯ ಸಮ್ಮೇಳನ ‘ನೃತ್ಯೋತ್ಕರ್ಷ-2023’ ಡಿ.24 ಮತ್ತು 25ರಂದು ಅಂಬಲಪಾಡಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸುಧೀರ್‌ರಾವ್ ಕೊಡವೂರು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 250ಕ್ಕೂ ಅಧಿಕ ನೃತ್ಯಗುರುಗಳು ಹಾಗೂ 700ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳಲ್ಲಿ ವಿಚಾರ ಸಂಕಿರಣ, ಭರತನಾಟ್ಯ ಪ್ರದರ್ಶನ ಹಾಗೂ ಚಿಂತನ ಮಂಥನ ನಡೆಯಲಿದೆ ಎಂದರು.
ಸಮ್ಮೇಳನವನ್ನು ಡಿ.24ರ ಬೆಳಗ್ಗೆ 9:45ಕ್ಕೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷತೆಯನ್ನು ಮೈಸೂರಿನ ನಾಟ್ಯಾಚಾರ್ಯ ಪ್ರೊ.ಕೆ. ರಾಮಮೂರ್ತಿ ರಾವ್ ವಹಿಸಲಿ ದ್ದಾರೆ. ಅತಿಥಿಗಳಾಗಿ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಾಜಿ ಶಾಸಕ ಕ್ಯಾ. ಗಣೇಶ ಕಾರ್ಣಿಕ್, ಹರಿಕೃಷ್ಣ ಪುನರೂರು ಭಾಗವಹಿಸುವರು ಎಂದರು.
ಎರಡು ದಿನಗಳ ಕಾಲ ಅನೇಕ ವಿದ್ವತ್ಪೂರ್ಣ ವಿಚಾರಗೋಷ್ಠಿಗಳು, ಚರ್ಚಾ ಗೋಷ್ಠಿಗಳು, ನೃತ್ಯ ಪ್ರದರ್ಶನಗಳು ನಡೆಯ ಲಿವೆ. ರಾಜ್ಯ ಹಾಗೂ ದೇಶ-ವಿದೇಶಗಳ ಪ್ರಸಿದ್ಧ ನೃತ್ಯಪಟುಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ ಡಿ.25ರ ಸಂಜೆ 4:30ಕ್ಕೆ ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ನಿ.ಬಿ. ವಿಜಯ ಬಲ್ಲಾಳ್, ಡಾ.ಮೋಹನ ಆಳ್ವ, ಪುತ್ತೂರಿನ ಡಾ.ಹರಿಕೃಷ್ಣ ಪಾಣಾಜೆ ಪಾಲ್ಗೊಳ್ಳು ವರು.ಕರಾವಳಿಯ ಹಿರಿಯ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ ಕುಮಾರ್‌ಗೆ ‘ನೃತ್ಯೋತ್ಕರ್ಷ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸುಧೀರ್‌ರಾವ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ವಿದ್ವಾನ್ ಯು.ಕೆ. ಪ್ರವೀಣ್, ಮಾನಸಿ ಸುಧೀರ್, ಭವಾನಿ ಶಂಕರ್, ಭಾಗೀರಥಿ ಉಪಸ್ಥಿತರಿದ್ದರು.