×
Ad

ಡಿ.27ರಿಂದ ಮಣಿಪಾಲ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ

Update: 2023-12-19 21:56 IST

ಉಡುಪಿ, ಡಿ.19: ಮಣಿಪಾಲ, ಉಡುಪಿ ಆಸುಪಾಸಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1948ರಲ್ಲಿ ಪ್ರಾರಂಭಗೊಂಡ ಮಣಿಪಾಲ ಪದವಿ ಪೂರ್ವ ಕಾಲೇಜು ಇದೀಗ 75 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂಬಂಧ ಡಿ.27ರಿಂದ 30ರವರೆಗೆ ‘ಅಮೃತ ಪರ್ವ’ವನ್ನು ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾಗಿರುವ ರೂಪ ಎಲ್.ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1970ರವರೆಗೆ ಇದು ಮಣಿಪಾಲ ಹೈಸ್ಕೂಲ್ ಆಗಿದ್ದು, 1971ರಿಂದ ಪದವಿ ಪೂರ್ವ ತರಗತಿಗಳು ಪ್ರಾರಂಭಗೊಂಡು ಮಣಿಪಾಲ ಜೂನಿಯರ್ ಕಾಲೇಜು ಆಗಿ ಮೇಲ್ದರ್ಜೆಗೇರಿತು. ಡಾ.ಟಿಎಂಎ ಪೈ ಸಂಚಾಲಕತ್ವದಲ್ಲಿ ಪ್ರಾರಂಭ ಗೊಂಡ ಈ ವಿದ್ಯಾಸಂಸ್ಥೆ ಮುಂದೆ ಟಿ.ರಮೇಶ್ ಪೈ ಹಾಗೂ ಟಿ.ಸುಧಾಕರ ಪೈ ಅವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದೆ ಎಂದರು.

ಕಳೆದ ಜ.1ರಿಂದ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ಇದೀಗ ಅಮೃತ ಪರ್ವ ನಡೆಯಲಿದೆ. ಡಿ.18ರಂದು ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ 2024ರ ಕ್ಯಾಲೆಂಡರ್ ಬಿಡುಗಡೆಗೊಂಡಿದ್ದು, ಮಣಿಪಾಲ, ಉಡುಪಿಯ ಮನೆಮನೆಗಳಿಗೆ ವಿತರಿಸ ಲಾಗುತ್ತದೆ ಎಂದರು.

ಡಿ.24ರ ರವಿವಾರ ಎಂಜೆಸಿಯ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ ನಡೆಯಲಿದೆ. ಆ ದಿನ ಬೆಳಗ್ಗೆ 8:00ಗಂಟೆಗೆ ಹಳೆ ವಿದ್ಯಾರ್ಥಿಗಳು ಆಗಮಿಸಿ ನಿವೃತ್ತ ಶಿಕ್ಷಕರು, ಉಪನ್ಯಾಸಕರಿಂದ ಹಿಂದಿನಂತೆ ಪಾಠಪ್ರವಚನಗಳನ್ನು ಕೇಳಲಿದ್ದಾರೆ. ಬಳಿಕ ತರಗತಿಯ ಹಾಜರಾತಿ, ಪಾಠಗಳು ನಡೆಯಲಿವೆ. ಬಳಿಕ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಫುಟ್‌ಬಾಲ್ ಪಂದ್ಯಾಟವೂ ನಡೆಯಲಿದೆ. ಇದರಲ್ಲಿ 1948ರಿಂದ ಕಳೆದ ವರ್ಷದವರೆಗಿನ ಹಳೆವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿ.27ರಂದು ‘ಅಮೃತಾರಂಭ’ ನಡೆಯಲಿದ್ದು, ಶೈಕ್ಷಣಿಕ ವಸ್ತುಪ್ರದರ್ಶನ ಉದ್ಘಾಟನೆ, ನವೀಕೃತ ಕೊಠಡಿಗಳ ಉದ್ಘಾಟನೆ, ರಂಗಮಂಟಪದ ಉದ್ಘಾಟನೆ ನಡೆಯಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.

ಡಿ.28ರ ಗುರುವಾರ ಅಮೃತ ಸಿಂಚನ, ಅಮೃತ ಮಹೋತ್ಸವವನ್ನು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸ ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮೂಡಬಿದರೆ ಡಾ.ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ ಎಂದು ರೂಪಾ ಭಟ್ ತಿಳಿಸಿದರು.

ಡಿ.29ರ ಶುಕ್ರವಾರ ಅಮೃತ ಸಂಗಮ, ಗೌರವ ಸಮರ್ಪಣೆ ನಡೆಯಲಿದ್ದು, ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಇದನ್ನು ಉದ್ಘಾಟಿಸಲಿದ್ದಾರೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 30ರಂದು ಶನಿವಾರ ಅಮೃತ ಸಂಹರ್ಷ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಅನಿತಾ ಮಲ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕಿಣಿ, ಕಾರ್ಯದರ್ಶಿ ಜಯರಾಮ ಶೆಟ್ಟಿಗಾರ್, ಟ್ರಸ್ಟ್‌ನ ಸಂಚಾಲಕ ಪ್ರಕಾಶ್ ಶೆಟ್ಟಿ, ಟ್ರಸ್ಟಿ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News