×
Ad

ಅಜೆಕಾರು| ಮಹಿಳೆಯ ಸರ ಅಪಹರಣ ಪ್ರಕರಣ: ಆರೋಪಿ ಬಂಧನ

Update: 2025-09-12 21:55 IST

ಉಡುಪಿ, ಸೆ.12: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಸುನೀಲ್ ರಮೇಶ್ ಲಮಾಣಿ(29) ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ ಚಿನ್ನದ ರೋಪ್ ಚೈನನ್ನು ವಶಪಡಿಸಿಕೊಳ್ಳಲಾಗಿದೆ.

ಸೆ.9ರಂದು ಕಾರ್ಕಳ ಎಳ್ಳಾರೆ ಗ್ರಾಮದ ಮುಳ್ಕಾಡು ನಿವಾಸಿ ಕುಮುದಾ ಶೆಟ್ಟಿ(80) ಎಂಬವರು ಮನೆಯ ಅಂಗಳ ದಲ್ಲಿ ಕುಳಿತುಕೊಂಡಿರುವಾಗ ತಾನು ಕಾರ್ಕಳದ ಸೂಪರ್‌ವೈಸರ್ ಎಂದು ಹೇಳಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ, ಮನೆಯಲ್ಲಿ ಸಿಸಿ ಕ್ಯಾಮರಾ ಇದೆಯೇ ಎಂದು ವಿಚಾರಿಸಿದನು. ಬಳಿಕ ಆತ ಕುಮುದಾರ ಹತ್ತಿರ ಬಂದು ಒಮ್ಮೆಲೇ ಬಲತ್ಕಾರವಾಗಿ ಅವರ ಕುತ್ತಿಗೆಗೆ ಕೈ ಹಾಕಿ ಅವರನ್ನು ನೆಲಕ್ಕೆ ದೂಡಿದ್ದು, ನಂತರ ಅವರ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ರೋಪ್ ಚೈನನ್ನು ಕಿತ್ತುಕೊಂಡು ಓಡಿ ಹೋಗಿರುವುದಾಗಿ ದೂರಲಾಗಿದೆ.

ಇದರಿಂದ ಕುಮುದಾ ಗಾಯಗೊಂಡಿದ್ದು, ಕಾರ್ಕಳ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿಸಲಾಗಿದೆ. ಕಳವಾದ ಚಿನ್ನದ ರೋಪ್ ಚೈನಿನ ಮೌಲ್ಯ 1,75,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಡಿ.ಮಂಜಪ್ಪ ನೇತೃತ್ವದ ಅಜೆಕಾರು ಎಸ್ಸೈ ಮಹೇಶ್ ಹಾಗೂ ಸಿಬ್ಬಂದಿಯವರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News