‘ಅಲಿಪ್ತ ನೀತಿ’ ನೆಹರೂ ಅವರ ಅತಿ ಪ್ರಮುಖ ಕೊಡುಗೆ: ಡಾ.ರಾಜಾರಾಮ್ ತೋಳ್ಪಾಡಿ
ಮಣಿಪಾಲ: ಭಾರತದ ವಿದೇಶಾಂಗ ನೀತಿಯ ತಾತ್ವಿಕ ತಳಹದಿ ಯಾಗಿ, ಅಲಿಪ್ತ ನೀತಿಯು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ ಎಂದು ರಾಜಕೀಯ ವಿಜ್ಞಾನಿ, ಬರಹಗಾರ ಹಾಗೂ ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ರಾಜಾರಾಂ ತೋಳ್ಪಾಡಿ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಆಶ್ರಯದಲ್ಲಿ ‘ನೆಹರು ಮರು ವ್ಯಾಖ್ಯಾನ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ತೋಳ್ಪಾಡಿ, ಅಲಿಪ್ತ ನೀತಿಯು ತಟಸ್ಥವಾಗಿರುವುದಲ್ಲ. ಆದರೆ ಮೂಲಭೂತವಾಗಿ ವಿಷಯದ ಗುಣವನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದು. ಅದು ನೆಹರೂ ಅವರ ವಿಶ್ವಶಾಂತಿಯ ದೃಷ್ಟಿಕೋನವಾಗಿತ್ತು. ಅದು ಅವರ ಪ್ರಾಮಾಣಿಕ ಕಾಳಜಿಯಾಗಿತ್ತು ಎಂದು ಹೇಳಿದರು.
ಜವಾಹರಲಾಲ್ ನೆಹರು ಅವರ ಇತರ ಕೊಡುಗೆಗಳೆಂದರೆ - ಆಧುನಿಕತೆಯ ಆಚರಣೆ, ವಿಮರ್ಶಾತ್ಮಕ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ಮತ್ತು ನಾಗರಿಕ ಜಾತ್ಯತೀತತೆ. ನಾವು ಅಲಿಪ್ತ ನೀತಿಯನ್ನು ಸೇರಿಸಿದರೆ, ಅದು ಐದು ಆಗುತ್ತದೆ. ಇದನ್ನು ಮತ್ತೊಮ್ಮೆ ಇನ್ನೊಂದು ಅರ್ಥದಲ್ಲಿ ಪಂಚಶೀಲ (ಐದು ಮೌಲ್ಯಗಳು) ಎಂದು ವಿವರಿಸಬಹುದು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ. ತೋಳ್ಪಾಡಿ ಹೇಳಿದರು.
ಆಧುನಿಕತೆಯು ಅವರ ಮತ್ತು ಮಹಾತ್ಮ ಗಾಂಧಿಯವರ ನಡುವಿನ ವ್ಯತ್ಯಾಸದ ಬಿಂದುವಾಗಿತ್ತು. ಅವರ ಇತರ ಕಲ್ಪನೆಗಳು ಭಾರತಕ್ಕೆ ಇಂದಿಗೂ ಸೂಕ್ತವಾಗಿವೆ. ಸಮಕಾಲೀನ ಜಾಗತಿಕ ಸಂದರ್ಭದಲ್ಲಿ, ಅಲಿಪ್ತ ನೀತಿಯು ಮತ್ತೊಮ್ಮೆ ಹೆಚ್ಚು ಮಹತ್ವದ್ದಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆ ದಿನಗಳಲ್ಲಿ ನೆಹರೂ ಅವರು ವಿಶ್ವ ದೃಷ್ಟಿಕೋನವನ್ನು ಹೊಂದಿದ್ದ ಭಾರತದಲ್ಲಿನ ಏಕೈಕ ನಾಯಕರಾಗಿದ್ದರು. ಇದರಿಂದಾಗಿಯೇ ಬಹುಶಃ ಮಹಾತ್ಮ ಗಾಂಧಿ, ನೆಹರುರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಚೀನಾದೊಂದಿಗಿನ ಭಾರತದ ಹಿನ್ನಡೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಆದರ್ಶವಾದಕ್ಕೆ ಆದ ಹಿನ್ನಡೆಯಾಗಿತ್ತು. ಅದು ನೆಹರೂ ಅನುಭವಿಸಿದ ದ್ರೋಹವಾಗಿತ್ತು ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಇವರು ಜಿಸಿಪಿಎಎಸ್ ಐತಿಹಾಸಿಕ ವ್ಯಕ್ತಿಗಳನ್ನು ವೈಭವೀಕರಿಸದೆ ಅಥವಾ ತುಚ್ಚಿಕರಿಸದೆ ಅವರಿಗೆ ನ್ಯಾಯಯುತವಾಗಿರಲು ಉದ್ದೇಶಿಸಿದೆ ಎಂದು ಹೇಳಿದರು.
ಪ್ರೊ.ಫಣಿರಾಜ್, ಡಾ.ಶ್ರೀಕುಮಾರ್, ಡಾ.ವಿಷ್ಣುಮೂರ್ತಿ ಮುಂತಾದ ವರು ಚರ್ಚೆಯಲ್ಲಿ ಭಾಗವಹಿಸಿದ್ದರು.ಜಿಸಿಪಿಎಎಸ್ ಪೀಸ್‌ಕ್ಲಬ್ ಕಾರ್ಯಕ್ರಮವನ್ನು ಆಯೋಜಿಸಿತ್ತು.