×
Ad

ಬೆಳಪು ಸಹಕಾರಿ ಸಂಘದ ಅಮೃತ ಮಹೋತ್ಸವ: ಸೆ.2ರಂದು ಉಚ್ಚಿಲದಲ್ಲಿ ಸಹಕಾರಿ ಮಹಲ್ ಉದ್ಟಾಟನೆ

Update: 2023-08-27 15:50 IST

ಪಡುಬಿದ್ರೆ, ಆ.27: ದೇವಿಪ್ರಸಾದ್ ಶೆಟ್ಟಿ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಬೆಳಪು ವ್ಯವಸಾಯ ಸಹಕಾರಿ ಸಂಘವು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇದರ ಸವಿನೆನಪಿಗಾಗಿ ಉಚ್ಚಿಲದಲ್ಲಿ ಸಹಕಾರಿ ಮಹಲ್ ಕಟ್ಟಡದ ಉದ್ಘಾಟನಾ ಸಮಾರಂಭವು ಸೆಪ್ಟಂಬರ್ 2ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ .

ಈ ಬಗ್ಗೆ ಶನಿವಾರ ಪ್ರಧಾನ ಕಚೇರಿಯ ಪಣಿಯೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮುನ್ನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‌ ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ. ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸುವರು. ನೂತನ ಸಹಕಾರಿ ಮಹಲ್‌ ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಎಂ.ಎನ್.ಆರ್. ಕಾನ್ಫರೆನ್ಸ್ ಹಾಲ್‌ನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸುವರು. ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಬಿಡುಗಡೆಗೊಳಿಸುವರು. 

ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ 'ಸಹಕಾರಿ ಧ್ರುವ' ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.

ಸಂಘ ನಡೆದು ಬಂದ ದಾರಿ: 1948ರಲ್ಲಿ ಸ್ಥಾಪಿತವಾದ ಬೆಳಪು, ಎಲ್ಲೂರು ಮತ್ತು ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ಗ್ರಾಮದ ಹತ್ತು ಮಂದಿ ಹಿರಿಯರು ಒಗ್ಗೂಡಿ ಪಣಿಯೂರಿನಲ್ಲಿ ಸಣ್ಣ ಕಟ್ಟಡದೊಂದಿಗೆ ಪ್ರಾರಂಭಿಸಲಾಗಿತ್ತು. ಈಗ ಸಹಕಾರಿ ಸಂಘವು ಪಣಿಯೂರು ಪ್ರಧಾನ ಕಚೇರಿ ಸಹಕಾರಿ ಸೌಧ ಸಹಿತ ಬೆಳಪು ಶಾಖೆ ಸಹಕಾರಿ ಸಂಭ್ರಮ, ಮೂಳೂರಿನಲ್ಲಿ ಸಹಕಾರಿ ಬಂಧು, ಎಲ್ಲೂರಿನಲ್ಲಿ ಸಹಕಾರಿ ಮಿತ್ರ ಹಾಗೂ ಉಚ್ಚಿಲದಲ್ಲಿ ಹೊಸದಾಗಿ ಸಹಕಾರಿ ಮಹಲ್ ಕಟ್ಟಡ ನಿರ್ಮಾಣಗೊಂಡಿದ್ದು ಎಲ್ಲ ಕಡೆಗಳಲ್ಲೂ ಸ್ವಂತ ಕಟ್ಟಡ ಸಹಿತವಾಗಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಕಂಪ್ಯೂಟರೀಕೃತ ಸೌಕರ್ಯದೊಂದಿಗೆ ಆಧುನಿಕತೆಗೆ ಹೊಂದಿಕೊಂಡು ಸೇವೆ ನೀಡುತ್ತಿದೆ.

ಸಾಧನೆಯ ಮೆಟ್ಟಿಲು: ಬೆಳಪು ವ್ಯವಸಾಯ ಸಹಕಾರಿ ಸಂಘವು ಸ್ವತಂತ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈವರೆಗೆ 4,350 ಸದಸ್ಯ ಬಲದೊಂದಿಗೆ 60 ಕೋಟಿ ರೂಪಾಯಿ ಠೇವಣಾತಿಯನ್ನು ಹೊಂದಿದ್ದು, 100 ಕೋಟಿ ರೂಪಾಯಿ ಠೇವಣಾತಿಯ ಗುರಿ ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಘವು, ಸತತ 25 ವರ್ಷಗಳಿಂದ ಎ ಶ್ರೇಣಿಯ ಬ್ಯಾಂಕಿಂಗ್ ಎಂಬ ಮಾನ್ಯತೆ ಹೊಂದಿದ್ದು ಸಂಘದ ಒಟ್ಟು ಸಾಧನೆಗಳಿಗಾಗಿ ಸತತ 16 ವರ್ಷಗಳಿಂದ ಅತ್ಯುತ್ತಮ ಸಹಕಾರಿ ಎಂಬ ಕಿರೀಟವನ್ನೂ ಮುಡಿಗೇರಿಸಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ ಎಸ್. ಆಚಾರ್ಯ, ಶೋಭಾ ಬಿ. ಭಟ್, ಮೀನಾ ಪೂಜಾರ್ತಿ, ವಿಮಲಾ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಕಾರಿ ಸುಲೋಚನಾ ದೇವಾಡಿಗ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News