×
Ad

ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಕೃತ್ಯವನ್ನು ಸಮರ್ಥಿಸಿದ ಪ್ರಮೋದ್‌ರನ್ನು ಬಂಧಿಸಿ: ಬಂಜಾರ ಸಮಾಜ ಒತ್ತಾಯ

Update: 2025-03-24 19:49 IST

ಉಡುಪಿ: ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಹೀನಾಯ ಕೃತ್ಯವನ್ನು ಸಮರ್ಥಿಸಿದ ಹಾಗೂ ಆಕೆಯನ್ನು ಕಳ್ಳಿಯೆಂದು ನಿಂದಿಸಿ, ಪ್ರಚೋದನಕಾರಿ ಭಾಷಣ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಕೂಡಲೇ ಬಂಧಿಸಬೇಕು ಮತ್ತು ಕೃತ್ಯ ಎಸಗಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗದ ಕರ್ನಾಟಕ ರಾಜ್ಯ ಬಂಜಾರ ಯುವಕರ ಹಾಗೂ ವಿದ್ಯಾಥಿ ಸಂಘದ ಅಧ್ಯಕ್ಷ ಗಿರೀಶ್ ಆರ್.ಡಿ. ಒತ್ತಾಯಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿ ಮಲ್ಪೆ ಮೀನುಗಾರರ ಸಂಘ ಮಲ್ಪೆಯಲ್ಲಿ ಕಳೆದ ಶನಿವಾರ ಆಯೋಜಿಸಿದ ಸಭೆಯಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಹಲ್ಲೆ ಕೃತ್ಯವನ್ನು ಸಮರ್ಥಿಸಿದ ಮಾಜಿ ಸಚಿವರಾದ ಕೆ.ರಘುಪತಿ ಭಟ್ ಹಾಗೂ ಪ್ರಮೋದ್ ಮಧ್ವರಾಜ್ ಬೇಷರತ್ ಆಗಿ ಕ್ಷಮೆ ಯಾಚಿಸಬೇಕು ಎಂದರು.

ಪರಿಶಿಷ್ಟ ಜಾತಿ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವುದನ್ನು ಸಮುದಾಯ ಉಗ್ರವಾಗಿ ಖಂಡಿಸುತ್ತದೆ. ಈ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಉಡುಪಿ ಜಿಲ್ಲೆ ಪಾರಂಪರಿಕವಾಗಿ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಮೀನುಗಾರಿಕೆ ಜೊತೆಗೆ ಧರ್ಮಶೃದ್ಧೆ ವ್ಯಾಪಕವಾಗಿರುವ ಸುಸಂಸ್ಕೃತ ನಾಡು ಎಂದು ಖ್ಯಾತಿಯನ್ನು ಪಡೆದಿದೆ. ರಾಜ್ಯದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮದ್ಯ ಕರ್ನಾಟಕದ ಪರಿಶಿಷ್ಟ ವರ್ಗದ ವಲಸಿಗರು ತುಳುನಾಡಿಗೆ ಜೀವನೋಪಾಯಕ್ಕಾಗಿ, ಹೊಟ್ಟೆಪಾಡಿಗಾಗಿ ಕಳೆದ ಹಲವು ದಶಕಗಳಿಂದ ಉದ್ಯೋಗ ಅರಸಿ ಇಲ್ಲಿಗೆ ಬರುವುದು ವಾಡಿಕೆಯಾಗಿದೆ ಎಂದು ವಿವರಿಸಿದರು.

ಮಾ.18ರಂದು ಮಲ್ಪೆ ಬಂದರು ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಒಂದೆರಡು ಕೆ.ಜಿ. ಮೀನು ತೆಗೆದ ಕಾರಣಕ್ಕಾಗಿ ಕಟ್ಟಿ ಹಾಕಿ ಥಳಿಸಿರುವುದು, ಹೀನಾಮಾನವಾಗಿ ನಿಂದಿ ಸಿರುವುದು ನಾಗರಿಕ ಸಮಾಜಕ್ಕೆ ಕಳಂಕವೆನಿಸಿದೆ. ಇದರಿಂದ ಮಹಿಳೆಗೆ ಅವಮಾನವಾಗಿದೆ. ಆಕೆಯ ಸ್ವಾಭಿಮಾನಕ್ಕೆ, ಆತ್ಮಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಗಿರೀಶ್ ತಿಳಿಸಿದರು.

ಈ ಘಟನೆಯಲ್ಲಿ ಮಹಿಳೆಯ ರಕ್ಷಣೆಗೆ ನಿಲ್ಲಬೇಕಿದ್ದ ಮಾಜಿ ಶಾಸಕರು, ಸಚಿವರು, ಹೊಟ್ಟೆಪಾಡಿಗಾಗಿ ಒಂದೆರಡು ಕೆ.ಜಿ.ಮೀನು ತೆಗೆದ ಮಹಿಳೆ ಯನ್ನು ರಾಜಕೀಯ ಕಾರಣಗಳಿಗಾಗಿ ದೂಷಿಸಿ, ಆಕೆಯನ್ನು ಕಳ್ಳಿಯೆಂದು ಘೋಷಿಸಿ ಅಪಮಾನಿಸಿದ್ದಾರೆ ಎಂದು ಅವರು ದೂರಿದರು.

ಹಿಂದೂ ನಾವೆಲ್ಲ ಒಂದು ಎನ್ನುವ ಸಂಘ ಪರಿವಾರ ಇಲ್ಲಿ ಸಾರ್ವಜನಿಕವಾಗಿ ಗುಂಪಿನಿಂದ ಅಪಮಾನಿಳಾದ ಮಹಿಳೆ ಸಹ ಒಬ್ಬ ಹಿಂದೂ ಆಗಿದ್ದರೂ ಆಕೆಯ ಪರವಾಗಿ ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಆರೋಪಿಸಿದ ಗಿರೀಶ್, ಲೋಕಸಭಾ ಸದಸ್ಯರು ಸೇರಿದಂತೆ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ. ಇವರೆಲ್ಲರಿಗೂ ನಾವು ಧಿಕ್ಕಾರ ಹೇಳುತ್ತೇವೆ ಎಂದರು.

ಇದು ಜಾತಿ ನಿಂದನೆಯ ಕೇಸ್:

ಪ್ರಕರಣದ ಸತ್ಯಾಸತ್ಯತೆಯ ವಿಡಿಯೋ ರಾಜ್ಯಾದ್ಯಂತ ಸದ್ದು ಮಾಡುತಿದ್ದರೂ, ಮಾಜಿ ಶಾಸಕ ರಘುಪತಿ ಭಟ್ ಅವರು ‘ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ನಿಂದನೆ ಕೇಸು ಅನ್ವಯವಾಗು ವುದಿಲ್ಲ’ ಎಂದು ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಕಾನೂನು ವಿರೋಧಿಯಾಗಿದೆ. ದಲಿತ ಮಹಿಳೆಯ ಮೇಲೆ ನಡೆದ ಹಲ್ಲೆ ಇದು ಅಟ್ರಾಸಿಟಿ ಕೇಸೇ ಆಗಿದೆ.ಇದಕ್ಕಾಗಿ ಅವರು ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪರಿಹಾರ ನೀಡಲು ಆಗ್ರಹ:

ಸಾರ್ವಜನಿಕವಾಗಿ ಥಳಿತ, ನಿಂದನೆ ಹಾಗೂ ಅಪಮಾನಕ್ಕೆ ಒಳಗಾದ ಸಂಸ್ರಸ್ತ ಮಹಿಳೆಗೆ ‘ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ ೧೯೮೯’ ಅಡಿ ನೀಡಲಾಗುವ ಪರಿಹಾರವನ್ನು ಕೂಡಲೇ ನೀಡಬೇಕು ಎಂದು ಅವರು ಬಂಜಾರ ಸಮುದಾಯದ ಪರವಾಗಿ ಸರಕಾರವನ್ನು ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯ ವಿರುದ್ಧ ರಾಜಕೀಯ ಪ್ರೇರಿತವಾಗಿ ಮನಸೋ ಇಚ್ಛೆ ಹೇಳಿಕೆ ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಸುಮೋಟೊ ಕೇಸ್ ದಾಖಲಿಸಬೇಕು ಎಂದೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಪುಷ್ಪಾ ಬಾಯಿ, ಮಂಜುನಾಥ್, ಮಂಜು ನಾಯ್ಕ್, ಸುನಅಇಲ್ ನಾಯ್ಕ್ ಉಪಸ್ಥಿತರಿದ್ದರು.

ಶಾಂತಿ ಸಭೆ ಕರೆಯಲು ಆಗ್ರಹ

ಬಂಜಾರ ಸಮುದಾಯದ ಸುಮಾರು ಎರಡು ಸಾವಿರ ಮಂದಿ ಮಲ್ಪೆ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ದುಡಿಯುತಿದ್ದಾರೆ. ಈ ಘಟನೆಯಿಂದ ಅವರಲ್ಲಿ ಅಸುರಕ್ಷಿತ ಭಾವನೆ ಮೂಡಿದೆ. ಹೀಗಾಗಿ ಪ್ರಕರಣದ ತೀವ್ರತೆಯನ್ನು ತಿಳಿಗೊಳಿಸುವ ಪ್ರಯತ್ನವಾಗಿ ಉಡುಪಿ ಜಿಲ್ಲಾಡಳಿತ ಕೃತ್ಯ ನಡೆದ ಸ್ಥಳದಲ್ಲೇ ಕೂಡಲೇ ‘ಶಾಂತಿಸಭೆ’ಯನ್ನು ಆಯೋಜಿಸಿ ಎಲ್ಲರ ನಡುವೆ ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಗಿರೀಶ್ ಆಗ್ರಹಿಸಿದರು.

ನಾಗರಿಕ ಸಮುದಾಯ ತಲೆತಗ್ಗಿಸುವ ಇಂತಹ ಅಮಾನವೀಯ ಕೃತ್ಯಗಳು ಮುಂದೆ ಮರುಕಳಿಸದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಹೊರ ಜಿಲ್ಲೆಗಳ ಪರಿಶಿಷ್ಟರು ಹಾಗೂ ಇತರ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News