×
Ad

ಬಂಟ ಸಮಾಜ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು: ಕೆ.ಎಸ್.ಶೆಟ್ಟಿ

Update: 2023-10-29 20:33 IST

ಉಡುಪಿ, ಅ.29: ಕೃಷಿ ಪ್ರಧಾನ ಸಮಾಜವಾದ ಬಂಟ ಸಮುದಾಯ ಇಂದು ಕೃಷಿಯಿಂದ ಹೊರಬಂದು ವಿವಿಧ ಕ್ಷೇತ್ರ ಗಳತ್ತ ಸಾಗುತ್ತಿದೆ. ಉನ್ನತ ವಿದ್ಯಾಭ್ಯಾಸದೊಂದಿಗೆ ಆಸಕ್ತಿಗೆ ತಕ್ಕುದಾದ ಉದ್ಯೋಗ ಮಾಡಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದಕ್ಕಾಗಿ ಸಮಾಜ ಇಂದು ಕೌಶಲ್ಯಾಧಾರಿತ ಶಿಕ್ಷಣಕ್ಕೆ, ಮೂಲ ಜ್ಞಾನಕ್ಕೆ ಒತ್ತು ನೀಡಬೇಕು ಎಂದು ಮುಂಬೈಯ ಹಿರಿಯ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದ್ದಾರೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿಯಲ್ಲಿ ನಡೆಯುತ್ತಿರುವ ವಿಶ್ವ ಬಂಟರ ಸಮ್ಮೇಳನ-2023ರ ಎರಡನೇ ದಿನದಂದು ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತಿದ್ದರು.

ನಗರಗಳಲ್ಲಿ ಇಂದು ಸಾಕಷ್ಟು ಉದ್ಯೋಗಗಳು ಲಭ್ಯವಿದೆ. ಆದರೆ ಅದಕ್ಕೆ ತಕ್ಕ, ಅರ್ಹತೆ ಹೊಂದಿದ ಅಭ್ಯರ್ಥಿಗಳು ಸಿಗು ತ್ತಿಲ್ಲ. ಒಂದು ನಿರ್ದಿಷ್ಟ ಖಾಲಿ ಹುದ್ದೆಯನ್ನು ತುಂಬಲು ಆರೇಳು ತಿಂಗಳು ಬೇಕಾಗುತ್ತದೆ. ಏಕೆಂದರೆ ಸ್ನಾತಕೋತ್ತರ ಪದವಿ ಪಡೆದರೂ ಇಂದಿನ ಮಕ್ಕಳಿಗೆ ಬೇಸಿಕ್ ಜ್ಞಾನದ ಕೊರತೆ ಇರುತ್ತದೆ. ಹೀಗಾಗಿ ಶೇ.90ಕ್ಕೂ ಅಧಿಕ ಅಂಕಗಳಿಸಿದವರಿ ದ್ದರೂ, ಹುದ್ದೆಗೆ ತಕ್ಕುದಾದ ಅಭ್ಯರ್ಥಿಗಳು ಸಿಗುವುದು ಕಷ್ಟವಾಗುತ್ತಿದೆ ಎಂದರು.

‘ಸ್ಥಿತ್ಯಂತರದಲ್ಲಿ ಬಂಟರು: ಶಿಕ್ಷಣ ಮತ್ತು ನಿರುದ್ಯೋಗ’ ವಿಷಯದ ಕುರಿತು ಮುಂಬಯಿಯ ಮತ್ತೊಬ್ಬ ಉದ್ಯಮಿ ಬಿ.ವಿವೇಕ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ವಿಷಯ ಮಂಡಿಸಿದ ಬೆಂಗಳೂರಿನ ಯುನಿವರ್ಸಲ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್‌ನ ಉಪೇಂದ್ರ ಶೆಟ್ಟಿ, ಶಿಕ್ಷಣವಿಲ್ಲದೇ ಉದ್ಯೋಗ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಲ್ಲಿ ವೃತ್ತಿಪರತೆ ಇರಲೇ ಬೇಕು ಎಂದರು.

ಇಂದು ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನಡುವೆ ದೊಡ್ಡ ಅಂತರ (ಗ್ಯಾಪ್) ಇದೆ. ಕೌಶಲ್ಯಭರಿತ ಶಿಕ್ಷಣ ಇದನ್ನು ತುಂಬುತ್ತದೆ. ಉದ್ಯೋಗಕ್ಕೆ ತಕ್ಕ ಅರ್ಹತೆಯನ್ನು ಉದ್ಯೋಗಾಕಾಂಕ್ಷಿ ಹೊಂದಿರಲೇಬೇಕು. ಇದು ಕೌಶಲ್ಯಾಭಿ ವೃದ್ಧಿಯಿಂದ ಮಾತ್ರ ಸಾಧ್ಯ ಎಂದರು.

ಇಂದು ಬಂಟರು ಯುಪಿಎಸ್‌ಸಿ, ಐಎಎಸ್, ಐಪಿಎಸ್, ಕೆಎಎಸ್‌ನಂಥ ಸರಕಾರದ ಆಡಳಿತಾತ್ಮಕ ಹುದ್ದೆ ನೀಡುವ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಆಸಕ್ತಿ ತೋರಿಸುವುದೇ ಇಲ್ಲ. ನನ್ನ ಸಂಸ್ಥೆಯಲ್ಲಿ ತರಬೇತಿ ಪಡೆದ ಸುಮಾರು ಒಂದು ಸಾವಿರ ಮಂದಿ ಸರಕಾರಿ ಅಧಿಕಾರಿಗಳಾಗಿದ್ದಾರೆ. ಇದರಲ್ಲಿ ಬಂಟರ ಸಂಖ್ಯೆ 30-40ನ್ನು ದಾಟುವುದಿಲ್ಲ. ಅದೂ ತೀರಾ ಕೆಳಮಟ್ಟದ ಹುದ್ದೆಗಳಲ್ಲಿ. ಐಎಎಸ್, ಐಪಿಎಸ್‌ಗೆ ಒಬ್ಬರೂ ಇರುವುದಿಲ್ಲ. ಇದಕ್ಕಾಗಿ ಹೆಚ್ಚಿನ ಪರಿಶ್ರಮ ಹಾಕಲು ನಮ್ಮವರು ಸಿದ್ಧರಿಲ್ಲ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಅದಾನಿ ಗ್ರೂಫ್‌ನ ದಕ್ಷಿಣ ಭಾರತ ಉಪಾಧ್ಯಕ್ಷ ಹಾಗೂ ಪಡುಬಿದ್ರಿ ಯುಪಿಸಿಎಲ್‌ನ ಕಿಶೋರ್ ಆಳ್ವ ಮಾತನಾಡಿ, ನಮ್ಮ ಯುವ ಜನಾಂಗಕ್ಕಾಗಿ ಹಳ್ಳಿಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ತೆರೆದು ಅವರಿಗೆ ಸೂಕ್ತ ತರಬೇತಿ ನೀಡ ಬೇಕು. ಅದೇ ರೀತಿ ರಾಜಕೀಯದಲ್ಲೂ ನಮ್ಮ ಸಮಾಜ ಮುಂಚೂಣಿಗೆ ಬರಬೇಕು ಎಂದರು.

ಮುಂಬಯಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್‌ನ ಸಿಎಂಡಿ ಡಾ.ಆರ್.ಕೆ ಶೆಟ್ಟಿ ಮಾತನಾಡಿ, ದೇಶದ ಇಂದಿನ ನಿರು ದ್ಯೋಗ ಪ್ರಮಾಣ ಶೇ.8.1 ಇದ್ದು, ಕರ್ನಾಟಕದ ಪ್ರಮಾಣ -ಶೇ.2.1- ತುಂಬಾ ಕಡಿಮೆ ಇದ್ದು, ಇವುಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಇದು ಶೇ.0.5 ಆಗಿದೆ. ಇಲ್ಲಿ ಬೀಡಿ, ಹೆಂಚು, ಕೃಷಿ ಹಾಗೂ ಮೀನುಗಾರಿಕೆ ಪ್ರಮುಖ ಉದ್ಯೋಗ ವಾಗಿತ್ತು. ಅವುಗಳು ಇಂದು ನಶಿಸುತ್ತಿವೆ ಎಂದರು.

ಉದ್ಯಮಿ ಪ್ರದೀಪ್‌ ಕುಮಾರ್ ರೈ ಐಕಳಬಾವ ಮಾತನಾಡಿ, ಬಂಟರದಲ್ಲಿಂದು ನಾಲ್ಕು ವರ್ಗಗಳಿವೆ. ಅತಿ ಶ್ರೀಮಂತರು, ಶ್ರೀಮಂತರು, ಮಧ್ಯಮ ವರ್ಗ ಹಾಗೂ ಬಡವರು. ನಮ್ಮ ಸಮಾಜ, ಬಡವರು ಹಾಗೂ ಮಧ್ಯಮ ವರ್ಗದ ಯವಜನತೆಗೆ ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ ಶಿಕ್ಷಣ, ಉದ್ಯೋಗಾವಕಾಶ ಒದಗಿಸಿ ಅವರನ್ನೂ ಮುಂಚೂಣಿಗೆ ತರುವ ಜವಾಬ್ದಾರಿ ಹೊರಬೇಕು ಎಂದರು.

ಮುಂಬೈಯ ಉದ್ಯಮಿ ಆನಂದ ಎಂ.ಶೆಟ್ಟಿ ತೋನ್ಸೆ, ಪಡುಬಿದ್ರಿಯ ಅಶೋಕ್‌ಕುಮಾರ್ ಶೆಟ್ಟಿ, ಮುಂಬಯಿ ವಿವಿ ಪ್ರಾಧ್ಯಾ ಪಕಿ ಡಾ.ಪೂರ್ಣಿಮಾ ಎಸ್.ಶೆಟ್ಟಿ, ದುಬಾಯಿ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿರ ಮಾತುಗಳನ್ನು ಆಡಿದರು. ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News