ಉಪ್ಪುಂದ ನಾಡದೋಣಿ ದುರಂತ: ಸಚಿವ ಮಂಕಾಳ ವೈದ್ಯ ಭೇಟಿ
ಬೈಂದೂರು, ಆ.1: ಉಪ್ಪುಂದ ಸಮೀಪದ ಮಡಿಕಲ್ ಕರ್ಕಿಕಳಿ ಬಳಿಯ ಸಮುದ್ರದಲ್ಲಿ ದೋಣಿ ದುರಂತದ ಸಂಭವಿಸಿದ ಸ್ಥಳಕ್ಕೆ ಮಂಗಳವಾರ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮೃತ ಹಾಗೂ ನಾಪತ್ತೆಯಾದ ಮೀನುಗಾರರ ಮನೆಗೆ ತೆರಳಿದ ಸಚಿವರು ಎರಡೂ ಕುಟುಂಬಗಳಿಗೆ ಮೀನುಗಾರ ಸಂಕಷ್ಟ ಪರಿಹಾರ ನಿಧಿ ಯಿಂದ ತಲಾ ಆರು ಲಕ್ಷ ರೂ. ಪರಿಹಾರದ ಚೆಕ್ ಹಸ್ತಾಂತರಿಸಿದರು. ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಕೊಡೇರಿ ಬಂದರಿನ ಕಾಮಗಾರಿಗೆ ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಅನುದಾನ ಒದಗಿಸಿಲು ಸಿಎಂ ಸಕರಾತ್ಮಕವಾಗಿ ಸ್ಪಂದಿಸಿ ದ್ದಾರೆ. ಶೀಘ್ರ ಬಂದರಿನ ಎರಡು ಭಾಗದಲ್ಲಿ ತಲಾ 250 ಮೀಟರ್ ಉದ್ದ ಬ್ರೇಕ್ ವಾಟರ್ ವಿಸ್ತರಿಸುವ ಕಾಮಗಾರಿ ಸಡೆಸಲಾಗುವುದು ಎಂದರು.
ಮೀನುಗಾರ ಸಂಕಷ್ಟ ಪರಿಹಾರ ನಿಧಿಯಿಂದ ಎರಡು ಕುಟುಂಬಗಳಿಗೆ ತಲಾ ಆರು ಲಕ್ಷ ರೂ ಪರಿಹಾರ ನೀಡಲಾಗಿದೆ. ಹಾನಿಗೀಡಾದ ದೋಣಿ ಹಾಗೂ ಬಲೆಗಳಿಗೆ ಸಮರ್ಪಕ ಪರಿಹಾರ ವಿತರಿಸಲಾಗುವುದು. ಘಟನೆ ನಡೆದು 24 ಗಂಟೆಯೊಳಗೆ ಪರಿಹಾರ ವಿತರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕರಾವಳಿ ಭಾಗದ 320ಕಿ.ಮೀ ಉದ್ದದ ಕಡಲತೀರದ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕಾಗಿ ಈಗಾಗಲೇ ಸರ್ವೇ ಕಾರ್ಯ ನಡೆದಿದ್ದು, ಅದರ ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಮತ್ಸ್ಯಾಶ್ರಯ ಯೋಜನೆಯಡಿ 100 ಮೀನುಗಾರಿಕಾ ಮನೆಗಳನ್ನು ನೀಡಲಾಗುವುದು. ಕರಾವಳಿ ಭಾಗದ ಮೀನುಗಾರರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಜಿಪಂ ಅಧ್ಯಕ್ಷ ಎಸ್.ರಾಜು ಪೂಜಾರಿ, ಮುಖಂಡ ರಾದ ಮದನಕುಮಾರ್, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬಿ.ಎಸ್.ಸುರೇಶ ಶೆಟ್ಟಿ, ದೀಪಕ್ ಕುಮಾರ ಶೆಟ್ಟಿ, ಮೋಹನ ಪೂಜಾರಿ, ರಾಣಿಬಲೆ ಮೀನುಗಾರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ಮೀನುಗಾರಿಕಾ ಹಾಗೂ ಬಂದರು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಶೋಧ ಕಾರ್ಯ ಮುಂದುವರಿಕೆ
ಉಪ್ಪುಂದ ಸಮೀಪ ಸಮುದ್ರದಲ್ಲಿ ದೋಣಿ ದುರಂತದಲ್ಲಿ ನೀರುಪಾಲಾದ ಮೀನುಗಾರ ಕರ್ಕಿಕಳಿಯ ಸತೀಶ್ ಖಾರ್ವಿ(31) ಎಂಬವರಿ ಗಾಗಿ ಇಂದು ಕೂಡ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಅವರ ಬಗ್ಗೆ ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಗಂಗೊಳ್ಳಿಯ ಕರಾವಳಿ ಕವಾಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜಪ್ಪ ನೇತೃತ್ವದ ತಂಡ ಡ್ರೋನ್ ಮೂಲಕ ಪತ್ತೆ ಕಾರ್ಯ ನಡೆಸಿತು. ಸ್ಥಳಕ್ಕೆ ಕರಾವಳಿ ಕವಾಲು ಪೊಲೀಸ್ ಕಾರ್ಯಪಡೆ ಬಂದಿದ್ದು, ಬೆಳಗ್ಗೆಯಿಂದ ಡ್ರೋನ್ ಮೂಲಕ ನಾಪತ್ತೆಯಾದ ಸತೀಶ್ ಖಾರ್ವಿ ಅವರನ್ನು ಹುಡುಕುವ ಕಾರ್ಯ ನಡೆಸಿದ್ದೇವೆ. ಆದರೆ ಕಡಲ ಅಬ್ಬರ ಜಾಸ್ತಿ ಇರುವುದರಿಂದ ಯಾವುದೇ ಸುಳಿವು ಕಂಡು ಬಂದಿಲ್ಲ ಎಂದು ನಂಜಪ್ಪ ತಿಳಿಸಿದ್ದಾರೆ.
ಜು.31ರಂದು ಸಂಜೆ ಮೀನುಗಾರಿಕೆ ಮುಗಿಸಿ ದಡಕ್ಕೆ ಬರುತ್ತಿದ್ದ ನಾಡದೋಣಿ ಸಮುದ್ರದ ಅಲೆಗೆ ಸಿಲುಕಿ ಮುಗುಚಿ ಬಿತ್ತೆನ್ನಲಾಗಿದೆ. ಇದರಲ್ಲಿದ್ದ ಎಂಟು ಮಂದಿ ಪೈಕಿ ಸತೀಶ್ ಖಾರ್ವಿ ನೀರಿನಲ್ಲಿ ಮುಳುಗಿ ನಾಪತ್ತೆಯಾದರೆ, ಉಳಿದ ಏಳು ಮಂದಿ ಈಜಿ ದಡ ಸೇರಿದ್ದರು. ಈ ವೇಳೆ ತೀವ್ರವಾಗಿ ಅಸ್ವಸ್ಥ ಗೊಂಡಿದ್ದ ನಾಗೇಶ್ ಖಾರ್ವಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.