×
Ad

ಇಸ್ರೇಲ್ ದಾಳಿಯ ಹಿಂದೆ ಏಷ್ಯಾ ಖಂಡವನ್ನು ಆಕ್ರಮಿಸುವ ಜಾಗತಿಕ ಸಾಮ್ರಾಜ್ಯಶಾಹಿ ಹುನ್ನಾರ: ಪ್ರೊ.ಫಣಿರಾಜ್

Update: 2025-06-19 11:45 IST

ಉಡುಪಿ: ಇಸ್ರೇಲ್ ಈ ದಾಳಿಯನ್ನು ಮುಂದುವರೆಸಿ ಇಡೀ ಫೆಲೆಸ್ತೀನಿಯರನ್ನು ನಿರ್ಣಾಮ ಮಾಡಿ, ಆ ನೆಲವನ್ನು ವಶಪಡಿಸಿಕೊಂಡು ನೆರೆಯ ರಾಷ್ಟ್ರಗಳ ಮೇಲೂ ಅಧಿಪತ್ಯ ಸಾಧಿಸಲು ಮುಂದಾಗಿದೆ. ಕ್ರಮೇಣ ಅದನ್ನು ಅಮೆರಿಕದವರ ವಸಾಹತು ಆಗಿ ಪರಿವರ್ತಿಸಲಾಗುತ್ತದೆ. ಆ ಮೂಲಕ ಇಡೀ ಏಷ್ಯಾ ಖಂಡವನ್ನು ಆಕ್ರಮಿಸುವ ದೊಡ್ಡ ಜಾಗತಿಕ ಸಾಮ್ರಾಜ್ಯಶಾಹಿ ಹುನ್ನಾರ ನಡೆಯುತ್ತಿದೆ ಎಂದು ಹಿರಿಯ

ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡ ಖಂಡಿಸಿ, ಫೆಲೇಸ್ತೀನ್ ಗೆ ಬೆಂಬಲ ವ್ಯಕ್ತಪಡಿಸಿ ಸಿಪಿಎಂ, ಸಿಪಿಐ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ದಲಿತ ಸಂಘರ್ಷ ಸಮಿತಿಗಳು ಜಂಟಿಯಾಗಿ ಉಡುಪಿ ಅಜ್ಜರಕಾಡುವಿನಲ್ಲಿರುವ ವಿಮಾ ನೌಕರರ ಸಂಘದ ಸಭಾಭವನದಲ್ಲಿ ಬುಧವಾರ ಆಯೋಜಿಸದ್ದ ಖಂಡನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೇಡಿಕೆ ಮಂಡನೆ: ಗಾಝಾ ಮೇಲಿನ ಆಕ್ರಮಣ ಮತ್ತು ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧಗಳನ್ನು ಖಂಡಿಸಿ, ಇಸ್ರೇಲ್ ಅನ್ನು ಜನಾಂಗೀಯ ದ್ವೇಷದ ಪ್ರಭುತ್ವವೆಂದು ಘೋಷಿಸಿ ಕ್ರಮ ಕೈಗೊಳ್ಳಬೇಕು.

ತಮ್ಮ ರಾಷ್ಟ್ರ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಫೆಲೆಸ್ತೀನಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು. ಭಾರತ ದೇಶದ ಜನರ ಸಾಮ್ರಾಜ್ಯಶಾಹಿ ವಿರೋಧಿ ಆಶೋತ್ತರಗಳಿಗೆ ಅನುಗುಣವಾಗಿ ಫೆಲೆಸ್ತೀನಿ ಯರ ಆಶಯಗಳನ್ನು ಬೆಂಬಲಿಸುತ್ತ ಬಂದಿರುವ ನೆಲೆಯಲ್ಲೇ ಭಾರತ ಸರಕಾರವು ನೀತಿಬದ್ಧ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಇಸ್ರೇಲಿನೊಂದಿಗೆ ಮಿಲಿಟರಿ ಮತ್ತು ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ವಿ., ಮುಸ್ಲಿಮ್ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹುಸೇನ್, ಇದ್ರೀಸ್ ಹೂಡೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ಸಿಪಿಐ ಪಕ್ಷದ ಮುಖಂಡ ಶಿವಾನಂದ ಅವರು ಫೆಲೆಸ್ತೀನ್ ಬೆಂಬಲಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಸಿಪಿಎಂ ಹಿರಿಯ ಮುಖಂಡ ಬಾಲಕೃಷ್ಣ ಶೆಟ್ಟಿ ವಹಿಸಿದ್ದರು. ದಲಿತ ಹಕ್ಕುಗಳ ಸಮಿತಿ ಸಂಜೀವ ಬಳ್ಕೂರು ಉಪಸ್ಥಿತರಿದ್ದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಗೊಲ್ಲ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News