ನ.11ರಂದು ಚಿಟ್ಟಾಣಿ ಸಪ್ತಾಹ ಸಮಾರೋಪ; ಸಾಮಗರಿಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ
Update: 2023-11-10 20:52 IST
ಉಡುಪಿ, ನ.10: ಕಳೆದೊಂದು ವಾರದಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಚಿಟ್ಟಾಣಿ ಸಂಸ್ಮರಣಾ ಯಕ್ಷಗಾನ ಸಪ್ತಾಹ ದ ಸಮಾರೋಪ ನ.11ರಂದು ಸಂಜೆ ನಡೆಯಲಿದ್ದು, ಈ ವೇಳೆ ಪ್ರತೀ ವರ್ಷದಂತೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ.ವಿ. ರಾವ್ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಂಜೆ 6:00 ಗಂಟೆಗೆ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಪ್ರೊ.ಎಂ.ಎಲ್. ಸಾಮಗರಿಗೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಹಾಗೂ ಸುಮತಿ ರಾವ್ ಅವರಿಗೆ ಟಿ.ವಿ.ರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಟಿ.ಎಸ್.ರಾವ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ನಂತರ ‘ಗದಾಯುದ್ಧ’ ಯಕ್ಷಗಾನ ಜರಗಲಿದೆ ಎಂದು ಚಿಟ್ಟಾಣಿ ಅಭಿಮಾನಿ ಬಳಗದ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.