ಹಂಗಾರಕಟ್ಟೆಯಲ್ಲಿ ಕೋಸ್ಟಲ್ ಬರ್ತ್ ಅಭಿವೃದ್ಧಿ: ಪರಿಸದ ಸಾರ್ವಜನಿಕರ ಅಹವಾಲು ಆಲಿಕೆ ಸಭೆ
ಉಡುಪಿ: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆಯ 1.62 ಹೆಕ್ಟೇರ್ ಪ್ರದೇಶದಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿ, ಬಂದರು ಮತ್ತು ಮೀನುಗಾರಿಕೆ ವಿಭಾಗ ಉಡುಪಿ ಇವರ ಮೂಲಕ ಸಾಗರಮಾಲ ಯೋಜನೆ ಯಡಿಯಲ್ಲಿ ಕೋಸ್ಟಲ್ ಬರ್ತ್‌ಅನ್ನು ಅಭಿವೃದ್ಧಿಪಡಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಇದಕ್ಕಾಗಿ ಹಂಗಾರಕಟ್ಟೆ ಮೀನುಗಾರಿಕಾ ಬಂದರಿನ ಜೆಟ್ಟಿ ಸಮೀಪದ ಹರಾಜು ಸಭಾಂಗಣದಲ್ಲಿ ಇಂದು ನಡೆದ ಪರಿಸರದ ಸಾರ್ವಜನಿಕರ ಅಹವಾಲು ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಡಾ.ವಿದ್ಯಾಕುಮಾರಿ ಮಾತನಾಡಿದರು.
ಕರ್ನಾಟಕ ಕರಾವಳಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತವಾಗಿ ತಂಗಲು ಅವಕಾಶವಾಗುವಂತೆ ಹಾಗೂ ಸಿಮೆಂಟ್, ಖಾದ್ಯತೈಲ ಮತ್ತು ಕೃಷಿ ಉತ್ಪನ್ನಗಳು ಮತ್ತು ಇತರ ವಾಣಿಜ್ಯ ಸರಕುಗಳನ್ನು ನಿರ್ವಹಿಸಲು, ಸುರಕ್ಷಿತ ಆಶ್ರಯ ಮತ್ತು ಸಂಗ್ರಹಣೆಗೆ ಬೇಡಿಕೆಗಳಿದ್ದು, ಸರಕು ಸಾಗಣೆಯ ಅನುಕೂಲಕ್ಕಾಗಿ 1.62 ಹೆಕ್ಟೇರ್ ಪ್ರದೇಶದಲ್ಲಿ ಕೋಸ್ಟಲ್ ಬರ್ತ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದವರು ವಿವರಿಸಿದರು.
ಪ್ರಸ್ತಾವಿತ ಯೋಜನೆಯ ಉದ್ದೇಶ, ಅವುಗಳ ಕುರಿತು ವಿವರವಾದ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ವಿವರಿಸಿದರು. ನಂತರ ಯೋಜನೆಯನ್ನು ಅನುಷ್ಟಾನಗೊಳಿಸುವ ಸಂಸ್ಥೆ ಯೋಜನೆಯ ಪವರ್ ಪಾಯಿಂಟ್ ವಿವರಣೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಅಭಿಪ್ರಾಯ, ಅನಿಸಿಕೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ಬಂದರು ಅಭಿವೃದ್ಧಿ ಸಮಿತಿಯ ಸದಸ್ಯರು ಪ್ರಸ್ತಾವಿತ ಯೋಜನೆಯ ಅಭಿವೃದ್ಧಿಗೆ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು. ಆದರೆ, ಬಂದರಿನ ಪ್ರಸ್ತಾಪಿತ ಸ್ಥಳದಲ್ಲಿ ಮೀನುಗಾರರ ದೋಣಿಗಳ ನಿಲುಗಡೆ ಮಾಡಲು ಸಹ ಅವಕಾಶ ಮಾಡಿಕೊಡುವಂತೆ ತಿಳಿಸಿದರು.
ಅಳಿವೆಯಲ್ಲಿ 3.5ಮೀಟರ್‌ಗಿಂತ ಹೆಚ್ಚಿನ ಹೂಳನ್ನು ತೆಗೆಯದಂತೆ, ಬ್ರೇಕ್ ವಾಟರ್ ನಿರ್ಮಿಸಲು ಹಾಗೂ ಸುತ್ತಮುತ್ತ ವಾಸ ಮಾಡುತ್ತಿರುವ ಕುಟುಂಬಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಯೋಜನೆಯನ್ನು ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಹಂಗಾರಕಟ್ಟೆ ಬೇಂಗ್ರೆ ಮೀನುಗಾರರ ಸಂಘದ ಅಧ್ಯಕ್ಷ ರಾಜು ಬಂಗೇರ, ಹಂಗಾರಕಟ್ಟೆ ಬೇಂಗ್ರೆ ಬಂದರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಸುವರ್ಣ, ಸಮಿತಿಯ ಸಲಹೆಗಾರರಾದ ಕೇಶವ್ ಕುಂದರ್, ಶಂಕರ್ ಬಂಗೇರ ಹಾಗೂ ಉತ್ತರ ಕರ್ಕೇರ ಉಪಸ್ಥಿತರಿದ್ದರು.