ಕೊರ್ಗಿ: ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ
ಕುಂದಾಪುರ, ನ.6: ಕಳೆದ 15ವರ್ಷಗಳಿಂದ ದುರಸ್ತಿ ಕಾಣದ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಸ್ಕುತ್ತೂರು ಬಸ್ ನಿಲ್ದಾಣದಿಂದ ಹಾರ್ಯಾಡಿ ಬ್ರಹ್ಮಸ್ಥಳ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸರಿಸುಮಾರು ಒಂದುವರೆ ಕಿ.ಮೀ ಉದ್ದದ ರಸ್ತೆಯನ್ನು ಗ್ರಾಮಸ್ಥರೇ ಸೇರಿ ತಮ್ಮದೇ ಲಕ್ಷಾಂತರ ರೂ. ಹಣ ವ್ಯಯಿಸಿ ದುರಸ್ತಿ ಮಾಡಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಹೆಸ್ಕುತ್ತೂರು ಹಾರ್ಯಾಡಿ ಬ್ರಹ್ಮಸ್ಥಾನ ದೇವಸ್ಥಾನದ ಆಸು-ಪಾಸು ಸುಮಾರು 30ಕ್ಕೂ ಮಿಕ್ಕಿ ಮನೆಗಳಿವೆ. 150ಕ್ಕೂ ಹೆಚ್ಚು ಮಂದಿ ಜನರು ಇದೇ ರಸ್ತೆಯನ್ನೇ ಅವಲಂಭಿಸಿ ದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ಮತ್ತು ಪಡಿತರ, ದಿನಸಿ ಇನ್ನಿತರ ಸಾಮಾಗ್ರಿಗಳನ್ನು ತರಲು ಇದೇ ರಸ್ತೆಯನ್ನೇ ಅವಲಂಭಿಸಿದ್ದಾರೆ. ಬೇಸಿಗೆಯಲ್ಲಿ ಬೈಕ್ ಹಾಗೂ ಆಟೋರಿಕ್ಷಾಗಳು ಕಷ್ಟಪಟ್ಟು ರಸ್ತೆಯಲ್ಲಿ ಸಂಚರಿಸಿದರೆ ಮಳೆಗಾಲದ ಮೂರು ತಿಂಗಳು ಕೆಸರು ರಾಡಿಯಾಗಿ ಸಂಚಾರ ದುಸ್ತರವಾಗಿರುತ್ತದೆ.
ವರ್ಷಂಪ್ರತಿ ತಮ್ಮದೆ ಹಣವನ್ನು ಸಂಗ್ರಹಿಸಿ ಸಂಚಾರಕ್ಕಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಿರುವ ಗ್ರಾಮಸ್ಥರು ಈ ಬಾರಿ ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ರಸ್ತೆ ದುರಸ್ತಿಗೆ ಪಣ ತೊಟ್ಟಿದ್ದಾರೆ. ಈಗಾಗಲೇ ಎರಡು ದಿನ ಜೆಸಿಬಿಯಿಂದ ರಸ್ತೆ ಸಮತಟ್ಟು ಮಾಡುವ ಕಾರ್ಯ ನಡೆದಿದ್ದು, ಸಮೀಪದ ಗಿಡಗಂಟಿಗಳನ್ನು ಶ್ರಮದಾನದ ಮೂಲಕವೇ ತೆರವು ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
‘ಈ ರಸ್ತೆ ಕಾಮಗಾರಿಗೆ ಗ್ರಾಪಂ ಯಾವುದೇ ಅನುದಾನ ಮೀಸಲು ಇಟ್ಟಿಲ್ಲ. ದುಸ್ಥಿತಿಗೆ ತಲುಪಿದ ಈ ರಸ್ತೆಯನ್ನು ಕಳೆದ 15 ವರ್ಷಗಳಿಂದ ದುರಸ್ತಿ ಮಾಡಿ ಕೊಡಿ ಎಂದು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಕೊಟ್ಟರೂ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ದ್ದಾರೆ.
‘ಹೆಸ್ಕುತ್ತೂರು-ಹಾರ್ಯಾಡಿ ಸಂಪರ್ಕ ರಸ್ತೆ ಜಾಗದ ಕುರಿತು ಖಾಸಗಿಯವರ ತಕರಾರುಗಳಿದ್ದರೂ ಪಂಚಾಯತ್ ಹಣ ವಿನಿಯೋಗಿಸಿ ಒಂದಷ್ಟು ದುರಸ್ತಿ ಕಾರ್ಯ ಮಾಡಲಾಗಿದೆ. ಈ ಬಗ್ಗೆ ದಾಖಲೆಯಿದೆ. ರಸ್ತೆ ಸಂಬಂಧಿತ ಜಾಗವು ಖಾಸಗಿಯ ವರದ್ದಾಗಿದ್ದು, ಕಾನೂನಾತ್ಮಕವಾಗಿ ಪಂಚಾಯತ್‌ಗೆ ಹಸ್ತಾಂತರ ಮಾಡಿದರೆ ಮುಂದಿನ ದಿನಗಳಲ್ಲಿ ಗ್ರಾಪಂನಲ್ಲಿ ಲಭ್ಯವಿರುವ ಅನುದಾನವಿಟ್ಟು ರಸ್ತೆಗೆ ಕಾಯಕಲ್ಪಒದಗಿಸಲಾಗುವುದು’
- ಸುಧಾಕರ ಶೆಟ್ಟಿ, ಪಿಡಿಒ ಗ್ರಾ.ಪಂ ಕೊರ್ಗಿ