×
Ad

ಎಂಇಎಸ್‌ನಿಂದ ಕರಾಳ ದಿನಾಚರಣೆ; ಸರಕಾರದಿಂದ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-11-01 21:12 IST

ಉಡುಪಿ: ರಾಜ್ಯ ಇಂದು ಕರ್ನಾಟಕ ನಾಮಕರಣದ 50ನೇ ವರ್ಷದ ಸಂಭ್ರಮದಲ್ಲಿದೆ. ಹೀಗಾಗಿ ಬೆಳಗಾವಿ ಸೇರಿ ಉತ್ತರ ಕರ್ನಾಟಕದಲ್ಲಿ ಎಂಇಎಸ್ ಕರಾಳ ದಿನಾಚರಣೆಯ ಕುರಿತು ನಾನು ಮಾತನಾಡುವುದಿಲ್ಲ. ಎಂಇಎಸ್ ಗಲಾಟೆ ಹಾಗೂ ಮಹಾರಾಷ್ಟ್ರ ಮೀಸಲಾತಿ ಹೋರಾಟದ ಪ್ರಭಾವದ ಕುರಿತು ಸರಕಾರ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.

ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಹಾಕುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಯಾವುದೇ ಸಮಸ್ಯೆ ಆಗಿಲ್ಲ. ಖಾತೆಗೆ ಜಮೆಯಾಗುವಲ್ಲಿ ನಾಲ್ಕೈದು ದಿನಗಳ ವಿಳಂಬವಾಗುತ್ತಿರಬಹುದು ಅಷ್ಟೇ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎರಡೂವರೆ ಸಾವಿರ ಕೋಟಿ ರೂ.ಗಳನ್ನು ಪ್ರತಿ ತಿಂಗಳು ಖಾತೆಗಳಿಗೆ ಹಾಕುವಾಗ ಸ್ವಲ್ಪ ಹೆಚ್ಚುಕಮ್ಮಿ ಆಗಬಹುದು. ಆದರೂ ರಾಜ್ಯದ ಒಂದು ಕೋಟಿ 8 ಲಕ್ಷ ಜನರಿಗೆ ಖಂಡಿತವಾಗಿ ಹಣ ತಲುಪುತ್ತಿದೆ ಎಂದರು.

ಇನ್ನು ಆರೇಳು ಲಕ್ಷ ಜನ ಉಳಿದುಕೊಂಡಿದ್ದಾರೆ. ಇವರಲ್ಲಿ ಎರಡು ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ. ಅಂಗನ ವಾಡಿ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಹೋಗಿ ತಿಳುವಳಿಕೆ ನೀಡಿ ದಾಖಲೆಗಳನ್ನು ಸರಿಪಡಿಸು ತಿದ್ದಾರೆ. ಬ್ಯಾಂಕ್ ಅಕೌಂಟ್ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡುತಿದ್ದೇವೆ ಎಂದರು.

ಉಡುಪಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆ ಕುರಿತು ಪ್ರಶ್ನಿಸಿದಾಗ, ವಿಚಾರವನ್ನು ಈಗಾಗಲೇ ಸಚಿವರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಸಿಬ್ಬಂದಿಗಳ ನೇಮಕ ಆಗುತ್ತೆ ಎಂಬ ಆಶಾ ವಾದ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರ. ರಾಜ್ಯಾದ್ಯಂತ ಟೆಂಡರ್ ಆಗಿದೆ. ಆದಷ್ಟು ಬೇಗ ಟೆಂಡರ್ ಮುಗಿಸಿ ಮೊಟ್ಟೆ ನೀಡುವ ಕೆಲಸಕ್ಕೆ ಚಾಲನೆ ಕೊಡುತ್ತೇವೆ ಎಂದರು.

ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಅಲ್ಲಿ ಸುವರ್ಣಸೌಧ ಇದೆ, ಏರ್ಪೋರ್ಟ್ ಇದೆ, ಜಿಲ್ಲೆಯ ವಿಸ್ತೀರ್ಣ ದೊಡ್ಡದಾಗಿದೆ. ಬೆಂಗಳೂರು ಬಳಿಕ ಅತಿ ಹೆಚ್ಚು ಶಾಸಕರು ಇರುವ ಜಿಲ್ಲೆ ಬೆಳಗಾವಿ ಎಂದರು. ಅಲ್ಲಿ ಶಾಸಕರಲ್ಲಿ ಯಾವುದೇ ಅಸಮಧಾನವಿಲ್ಲ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಬಿಜೆಪಿ ಶಾಸಕರ ನಿರ್ಲಕ್ಷ್ಯದ ದೂರು ಹಾಗೂ ಕೆಡಿಪಿ ಸಭೆಯ ನಡೆಸಲು ನಿರಾಸಕ್ತಿಯ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳೊಂದಿಗೆ ಒಂದು ಕೆಡಿಪಿ ಸಭೆ ನಡೆದಿದೆ. ಅಲ್ಲದೇ ನಿನ್ನೆ ಕೆಡಿಪಿ ಸಭೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಆದರೆ ಬಿಜೆಪಿ ಶಾಸಕರೇ ಸಭೆಗೆ ಬರಲು ಅಸಮರ್ಥತೆ ಹಾಗೂ ಬೇರೊಂದು ತಾರೀಕು ನಿಗದಿಪಡಿಸುವಂತೆ ಕೋರಿಕೊಂಡ ಕಾರಣ ಸದ್ಯ ಕೆಡಿಪಿ ಸಭೆಗೆ ಇನ್ನೊಂದು ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News