ಡಾ.ಗಿರಿಜಾ ಶಾಸ್ತ್ರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
ಉಡುಪಿ, ಜ.17: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯ ದಲ್ಲಿ ಹಿರಿಯ ಲೇಖಕಿ ಡಾ.ಗಿರಿಜಾ ಶಾಸ್ತ್ರಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಶನಿವಾರ ಉಡುಪಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಚದುರಿ ಹೋಗಿರುವ ಮುಳಿಯ ತಿಮ್ಮಪ್ಪಯ್ಯ ಅವರ ಬರೆದ ಅನೇಕ ಕೃತಿಗಳು ಒಟ್ಟುಗೂಡಿಸಿ ಸಮಗ್ರ ಸಂಪುಟ ಹೊರತರಬೇಕು. ಅಲ್ಲದೆ ಅವರ ಕುರಿತು ನಡೆಸಿರುವ ಪಿಎಚ್‌ಡಿ ಅಧ್ಯಯನವನ್ನು ಕೃತಿಯಾಗಿ ರಚಿಸ ಬೇಕು. ಇದಕ್ಕೆಲ್ಲ ಬೇಕಾದ ಆರ್ಥಿಕ ನೆರವು ನೀಡುವ ಕಾರ್ಯವನ್ನು ಸರಕಾರ ಮಾಡಬೇಕಾಗಿದೆ ಎಂದರು.
ಮುಳಿಯ ತಿಮ್ಮಪ್ಪಯ್ಯ ಹೊರಗಿನ ಸಂಪರ್ಕ ಇಲ್ಲದೆಯೇ ದೇಶಿ ಮೂಲಕ ಅಧ್ಯಯನ ಮಾಡಿದರು. ಇಂದಿನ ಯುವ ಪೀಳಿಗೆ ಮುಳಿಯ ತಿಮ್ಮಪ್ಪಯ್ಯ ಅವರನ್ನು ಓದಿಲ್ಲ. ಹಾಗಾಗಿ ಯುವ ಸಮುದಾಯಕ್ಕೆ ಅವರ ಪರಿಚಯ ಮಾಡುವ ಕಾರ್ಯ ಮಾಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮುಳಿಯ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ನಾ ದಾಮೋದರ ಶೆಟ್ಟಿ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಸರಸ್ವತಿ ಅಭಿನಂದನಾ ಭಾಷಣ ಮಾಡಿದರು. ಮುಳಿಯ ಕುಟುಂಬಸ್ಥರಾದ ರಾಘವಯ್ಯ, ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.