×
Ad

ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್ ಬೃಹತ್ ವಿಸ್ತರಣೆ: ಕೆಎಂಎಫ್ ಎಂಡಿ ಎಂ.ಕೆ ಜಗದೀಶ್

Update: 2024-01-07 18:02 IST

ಮಣಿಪಾಲ: ರಾಜ್ಯದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಪರಿಹರಿಸುವುದರ ಜೊತೆಗೆ ರೈತರ ಜೀವನಾಧಾರವಾಗಿರುವ ಕೆಎಂಎಫ್ ನಂದಿನಿ ಸಾಗರೋತ್ತರದಲ್ಲಿಯೂ ಬಹುಬೇಡಿಕೆ ಪಡೆದುಕೊಳ್ಳುತ್ತಿದೆ ಎಂದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಎಂ.ಕೆ ಹೇಳಿದ್ದಾರೆ.

ಭಾರತೀಯ ಸಂಜಾತ ಅಮೆರಿಕನ್ ವೈದ್ಯರ ಒಕ್ಕೂಟ (ಎಎಪಿಐ) ವತಿಯಿಂದ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ವ್ಯೆ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಆರೋಗ್ಯ ಶೃಂಗಸಭೆಯ ಎರಡನೇ ದಿನ ನಡೆದ ಸಿಇಒ ಫೋರಂನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ನೂರಾರು ವೈದ್ಯರ ಸಮಾಗಮದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಾದ ವಿಚಾರ ಸಂಕಿರಣದ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ನಂದಿನಿ ಹಾಲಿನ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಅದನ್ನು ಗ್ರಾಹಕರಿಗೆ ನೀಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಈ ಹೆಲ್ತ್ ಸಮ್ಮಿಟ್ ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರಾಂಡ್ ಅನ್ನು ವಿಸ್ತರಿಸುವ ಆಶಯವನ್ನು ಕೆಎಂಎಫ್ ಹೊಂದಿದೆ ಎಂದು ಅವರು ನುಡಿದರು.

ಕೆಎಂಎಫ್ ಸಂಸ್ಥೆಯು ನಂದಿನಿ ಹೆಸರಿನಡಿ ಹಲವು ಉತ್ಪನ್ನಗಳನ್ನು ಪರಿಚಯಿಸಿದ್ದು, ಕರ್ನಾಟಕದಾದ್ಯಂತ ಪ್ರತಿನಿತ್ಯ ೪೫ ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಮಂಡಳಿಯು ಶೇ.೮೪ರಷ್ಟು ಲಾಭವನ್ನು ನೇರವಾಗಿ ರೈತರಿಗೆ ನೀಡುತ್ತಿದೆ ಎಂದು ಅವರು ವಿವರಿಸಿದರು.

ಫಾರ್ಮಸ್ಯೂಟಿಕಲ್ಸ್ ಮತ್ತು ಹೆಲ್ತೆಕೇರ್‌ನಲ್ಲಿ ಜೈಡಸ್ ಸಂಸ್ಥೆ ಅಮೆರಿಕದ ಅಗ್ರ 5 ಸಂಸ್ಥೆಗಳಲ್ಲಿ ಒಂದಾಗಿದೆ. ಕೋವಿಡ್-19ಕ್ಕೆ ಚುಚ್ಚುಮದ್ದು ರಹಿತ ಲಸಿಕೆಯನ್ನು ಜಾಗತಿಕವಾಗಿ ಪರಿಚಯಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಜೈಡಸ್‌ಗೆ ಸಲ್ಲುತ್ತದೆ ಎಂದು ಜೈಡಸ್ ಲೈಫ್ ಸಾಯನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಗಣೇಶ್ ನಾಯಕ್ ತಿಳಿಸಿದರು.

ವೇದಿಕೆಯಲ್ಲಿದ್ದ ಇತರ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರು, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಂಸ್ಥೆಗಳು ನೀಡುತ್ತಿರುವ ಕೊಡುಗೆಗಳನ್ನು ಸಭೆಯಲ್ಲಿ ಸೇರಿದ ವೈದ್ಯಕೀಯ ಸಮೂಹದೊಂದಿಗೆ ಹಂಚಿಕೊಂಡರು.

ಸಿಇಒ ಫೋರಂನ ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಪ್ರೊ. ಎಂ.ಡಿ ನಲಪತ್, ಎಎಪಿಐ ಜಿಹೆಚ್‌ಎಸ್ ಹೊಸದಿಲ್ಲಿ ಮತ್ತು ಮಣಿಪಾಲದ ಮುಖ್ಯಸ್ಥರಾದ ಡಾ.ಸಂಪತ್ ಶಿವಾಂಗಿ, ಎಎಪಿಐ ಅಧ್ಯಕ್ಷ ಡಾ. ಅಂಜನಾ ಸಮದ್ದಾರ್, ಜಾಗತಿಕ ಹೆಲ್ತ್‌ಕೇರ್ ಸಮ್ಮಿಟ್ ಸಿಇಒ ಫೋರಂನ ಮಣಿಪಾಲ ಮುಖ್ಯಸ್ಥಲಾದ ಡಾ. ಸುಬ್ರಹ್ಮಣ್ಯ ಭಟ್, ಡಾ. ವಿಜಯ್ ಗೋಪಾಲ್ ಮತ್ತು ಡಾ.ಕೃಷ್ಣ ನಾಯಕ್ ಉಪಸ್ಥಿತರಿದ್ದರು.

ನಂತರ ನಡೆದ ಮಹಿಳಾ ವೇದಿಕೆ ಕಾರ್ಯಕ್ರಮದಲ್ಲಿ ತಿರುವನಂತಪುರ ರಾಜಕುಮಾರಿ ಲಕ್ಷ್ಮೀಬಾಯಿ ನಲಪತ್, ಎಎಪಿಐ ಯುಸ್ ಅಧ್ಯಕ್ಷೆ ಡಾ. ಅಂಜನಾ ಸಮದ್ದಾರ್, ಎನ್‌ಆರ್‌ಐ ಕರ್ನಾಟಕ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಡಾ.ಉದಯ ಶಿವಾಂಗಿ, ಡಾ. ಅನ್ನಪೂರ್ಣ ಭಟ್, ಡಾ. ಊರ್ಮಿಳ ಕೋವಿಲಂ ಉಪಸ್ಥಿತರಿದ್ದರು.

ರಾಜ್ಯಕ್ಕೆ ಭೇಟಿ ಕೊಟ್ಟ ಅಮೆರಿಕಾದ ಭಾರತೀಯ ಸಂಜಾತ ನೂರಾರು ವೈದ್ಯರ ಸಮೂಹ ಶನಿವಾರ ಬೆಳಗ್ಗೆ ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದರೆ ಸಂಜೆ ಮಣಿಪಾಲದ ಹಸ್ತಶಿಲ್ಪ ಹೆರಿಟೇಜ್ ಗ್ರಾಮದಲ್ಲಿರುವ ಮ್ಯೂಸಿಯಂ ಗೆ ಭೇಟಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News