×
Ad

ಶಿಕ್ಷಣದಿಂದ ವಿದ್ಯಾರ್ಥಿಗಳು ದೇಶದ ನಿಜವಾದ ಆಸ್ತಿಯಾಗಲು ಸಾಧ್ಯ: ಸಚಿವ ಎಚ್.ಕೆ. ಪಾಟೀಲ್

Update: 2024-01-14 17:57 IST

ಕುಂದಾಪುರ: ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ವಿದ್ಯಾರ್ಥಿಗಳು ಈ ದೇಶದ ನಿಜವಾದ ಆಸ್ತಿಯಾಗಬೇಕು. ಪೋಷಕರು ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಬೇಕು. ಮುಂದೆ ಅವರು ಈ ದೇಶದ ನಿಜವಾದ ಆಸ್ತಿಯಾಗುತ್ತಾರೆ. ಆದುದರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಕಾರ್ಯ ಮಾಡಬೇಕು ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ನೂತನವಾಗಿ ನಿರ್ಮಾಣಗೊಂಡ ’ಬ್ಯಾರೀಸ್ ನಾಲೆಜ್ ಕ್ಯಾಂಪಸ್’ ಇದರ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಗಳ ನೂತನ ಲಾಂಛನವನ್ನು ರವಿವಾರ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳ ಭವಿಷ್ಯ ಅವರ ಕೈಯಲ್ಲಿಯೇ ಇದೆ. ಹೆಚ್ಚು ಹೆಚ್ಚು ಓದಿದಷ್ಟು ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಅಧ್ಯಯನ ಅಭ್ಯಾಸ ಅವರನ್ನು ಬುದ್ದಿವಂತರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳು ಶಿಕ್ಷಣದ ವಿಚಾರದಲ್ಲಿ ಶಾಟ್‌ಕಟ್ ಹುಡುಕಲು ಹೋಗಬಾರದು. ಅದು ಅವರ ಯಶಸ್ಸನ್ನೇ ಕಟ್ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜದದಲ್ಲಿ ಭಾತೃತ್ವ ಬಿತ್ತಬೇಕು. ಮಕ್ಕಳ ಮನಸ್ಸಿನಲ್ಲಿ ಧ್ವೇಷದ ಬದಲು ಪ್ರೀತಿ ಬೆಳೆಸಬೇಕು. ಆ ಮೂಲಕ ದೇಶ ಕಟ್ಟುವ ಕಾರ್ಯ ಮಾಡಬೇಕು. ಮಕ್ಕಳ ಮನಸ್ಸಿನಲ್ಲಿ ದೇಶಾಭಿಮಾನವನ್ನು ಗಟ್ಟಿಗೊಳಿಸಬೇಕು. ಅದುವೇ ನಿಜವಾದ ದೇಶ ಕಟ್ಟುವ ಕಾರ್ಯವಾಗಿದೆ. ಈ ಸಂಸ್ಥೆಯು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

‘ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್’ ಇದರ ನೂತನ ಮಹಾದ್ವಾರವನ್ನು ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಸಂಪತ್ತನ್ನಾಗಿ ಮಾಡುವುದೇ ನಿಜವಾದ ದೇಶ ಪ್ರೇಮ. ಶಾಸಕರು, ಸಂಸದರು, ಅಧಿಕಾರಿಗಳು ಬಲಿಷ್ಠರಾದರೆ ಈ ದೇಶ ಬಲಿಷ್ಟ ಆಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಬಲಿಷ್ಠವಾದಾಗ ಮಾತ್ರ ಈ ದೇಶ ಬಲಿಷ್ಠ ಆಗಲು ಸಾಧ್ಯ. ಅದಕ್ಕೆ ಪೂರಕವಾದ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿ, "ಈ ಸಂಸ್ಥೆಯನ್ನು ಸಮಾಜದಲ್ಲಿ ನೆಮ್ಮದಿ ಮೂಡಿಸುವಂತಹ ವಿಶ್ವ ವಿದ್ಯಾನಿಲಯವನ್ನಾಗಿ ಬೆಳೆಸುವ ಯೋಚನೆ ನಮ್ಮ ಮುಂದೆ ಇದೆ. ನಮ್ಮ ಸಂಸ್ಥೆಗಳ ನೇತೃತ್ವದಲ್ಲಿ ಕಳೆದ 28 ತಿಂಗಳಿನಿಂದ ಕೋಡಿ ಬೀಚ್‌ನಲ್ಲಿ ಕ್ಲೀನ್ ಮಾಡುವ ಕಾರ್ಯ ಮಾಡಲಾಗುತ್ತದೆ. ಇದರ ಪರಿಣಾಮ ಕಡಲಾಮೆಗಳು ಬೀಚ್‌ಗೆ ಬಂದು ಮೊಟ್ಟೆ ಇಡುವುದು ಹೆಚ್ಚಾಗುತ್ತಿದೆ" ಎಂದರು.

"ಕೋಡಿ ಊರನ್ನು ಸಿಗರೇಟು, ಗಾಂಜಾ, ಮದ್ಯಮುಕ್ತ ಪ್ರದೇಶವನ್ನಾಗಿ ಮಾಡಿ ಮಹಾತ್ಮ ಗಾಂಧಿಯ ರಾಮರಾಜ್ಯವನ್ನು ಸ್ಥಾಪಿಸಬೇಕು. ಈ ರಾಮರಾಜ್ಯದಲ್ಲಿ ಪ್ರೀತಿ, ವಿಶ್ವಾಸ, ಪರಿಶ್ರಮ, ಕೊಡುವಿಕೆ ಇರಬೇಕು. ಸತ್ಯ ನ್ಯಾಯ ಸಮಾನತೆಯೊಂದಿಗೆ ಎಲ್ಲರೂ ಒಗ್ಗಟ್ಟಿನಲ್ಲಿ ಈ ಬಗ್ಗೆ ಕ್ರಾಂತಿ ಮಾಡಬೇಕು. ಅನ್ಯೋನತೆಯಿಂದ ಬದುಕಿ ಇಡೀ ಪ್ರಪಂಚಕ್ಕೆ ತೋರಿಸಬೇಕು" ಎಂದು ಅವರು ತಿಳಿಸಿದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಂಸ್ಥೆಯ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪರಿಸರವಾದಿ ಪದ್ಮಶ್ರೀ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಎಂ.ಇ.ಐ.ಎಫ್ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸಿದ್ದೀಕ್ ಬ್ಯಾರಿ, ಡಾ.ಆಸೀಫ್ ಬ್ಯಾರಿ, ಬ್ಯಾರೀಸ್ ಸಂಸ್ಥೆಯ ಬಿ.ಎಡ್ ವಿಭಾಗದ ಪ್ರಾಂಶುಪಾಲ ಸಿದ್ದಪ್ಪ, ಬ್ಯಾರೀಸ್ ಪಿಯು ಕಾಲೇಜು ಪ್ರಾಂಶುಪಾಲ ಡಾ.ಸುರೇಶ್ ಶೆಟ್ಟಿ, ಎಹೆಚ್‌ಎಂ ಬ್ಯಾರಿ ಮೆಮೊರಿಯಲ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಶೀಲ ಶೆಟ್ಟಿ, ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜತ್ತಪ್ಪ ಉಪಸ್ಥಿತರಿದ್ದರು.

ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಬ್ಯಾರೀಸ್ ಡಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಪಿರ್ದೋಸ್ ವಾರ್ಷಿಕ ವರದಿ ವಾಚಿಸಿದರು. ಪಿಯು ಕಾಲೇಜಿನ ಉಪನ್ಯಾಸಕಿ ಝಿಯಾನ ಬಹುಮಾನಿತರ ಪಟ್ಟಿ ವಾಚಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಮೀರ್ ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕ ಹಯವದನ ಉಪಾಧ್ಯಾಯ ಹಾಗೂ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸೈಯ್ಯದ್ ಬ್ಯಾರಿ ಯೋಚನೆಗೆ ಸಚಿವರ ಸ್ಪಂದನೆ!

ಐದು ಬ್ಲೂ ಬೀಚ್‌ನಲ್ಲಿ ಕೋಡಿ ಬೀಚ್ ಕೂಡ ಒಂದು. ಇಲ್ಲಿನ ಬೀಚ್, ಸೀವಾಕ್ ಹಾಗೂ ಕಾಂಡ್ಲಾವನವನ್ನು ಸರಕಾರ ಅಭಿವೃದ್ಧಿ ಪಡಿಸಬೇಕು ಎಂದು ಸಂಸ್ಥೆಯ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಮನವಿ ಮಾಡಿದರು.

ಅಲ್ಲದೆ ಕಾಸರಗೋಡಿನಿಂದ ಕಾರವಾರವರೆಗಿನ ಸಮುದ್ರ ತೀರವನ್ನು ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲ್ಯಾನ್ ಮಾಡಬೇಕು. ಶಿಕ್ಷಣ, ವಾಣಿಜ್ಯ, ವಸತಿ, ಮನರಂಜನೆ, ಆರೋಗ್ಯ ಸೇರಿದಂತೆ ಎಲ್ಲವನ್ನು ಒಳಗೊಂಡ ಕ್ಲಸ್ಟರ್ ಮಾಡ ಬೇಕು ಎಂದು ಅವರು ಹೇಳಿದರು. ಇದಕ್ಕೆ ಸ್ಪಂದಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಈ ಕುರಿತು ಸದ್ಯದಲ್ಲೇ ತಜ್ಞರ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಅಪರೂಪದ ಶಿಕ್ಷಣ ಸಂಸ್ಥೆ: ಎಚ್.ಕೆ.ಪಾಟೀಲ್

1906ರಲ್ಲಿ ಆರಂಭಗೊಂಡ ಈ ಶಿಕ್ಷಣ ಸಂಸ್ಥೆಯು ಮಕ್ಕಳ ಕೊರತೆಯಿಂದ ಮುಚ್ಚುಗಡೆಯಾಗುವ ಸ್ಥಿತಿಯಲ್ಲಿತ್ತು. ಅಂತಹ ಸಂದರ್ಭದಲ್ಲಿ ತಮ್ಮ ವ್ಯವಹಾರ ಬಂದ್ ಮಾಡುತ್ತೇವೆ ಹೊರತು ಶಾಲೆ ಬಂದ್ ಮಾಡಲು ಬಿಡುವುದಿಲ್ಲ ಎಂದು ಹೇಳಿ ಬ್ಯಾರಿ ಸಹೋದರರು ಛಲದಿಂದ ಕೂಡಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಈ ಸಂಸ್ಥೆಯು ಇನ್ನಷ್ಟು ಬೆಳೆದು ವಿಶ್ವವಿದ್ಯಾನಿಲಯ ಮಟ್ಟಕ್ಕೆ ಏರಲಿ ಎಂದು ಸಚಿವ ಎಚ್.ಕೆ.ಪಾಟೀಲ್ ಹಾರೈಸಿದರು.

118 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆಯ ಧ್ಯೇಯೋದ್ದೇಶ ತಿಳಿದು ಅಚ್ಚರಿಯಾಯಿತು. ಇದೊಂದು ಅಪರೂಪದ ಸಂಸ್ಥೆಯಾಗಿದೆ. ಇವರಿಗೆ ದೇವರ ಮೇಲಿರುವ ಬಲವಾದ ನಂಬಿಕೆಯೇ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಬಡ, ಗ್ರಾಮೀಣ ಭಾಗದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ಮಾಡುವ ಈ ಸಂಸ್ಥೆಯ ಕಾರ್ಯ ಮೆಚ್ಚುವಂತದ್ದು ಎಂದರು.

ಉತ್ತಮ ಸಂಸ್ಕಾರ ನೀಡುತ್ತಿರುವ ಬ್ಯಾರೀಸ್ ಸಂಸ್ಥೆ: ಯು.ಟಿ.ಖಾದರ್

"ಸಮಾಜದಲ್ಲಿ ಸಹೋದರತೆ, ಸಮಾನತೆ, ಪ್ರೀತಿ, ವಿಶ್ವಾಸದಿಂದ ಬಾಳುವಂತಹ ಜಾತ್ಯತೀತ ಶಿಕ್ಷಣ ನೀಡುವ ಸಂಸ್ಥೆಗಳು ನಮ್ಮ ದೇಶಕ್ಕೆ ಅತೀ ಅಗತ್ಯ. ಇಂದು ಶಿಕ್ಷಣ ಪಡೆದವರೇ ಹೆಚ್ಚು ಕಂಟಕ ಆಗುತ್ತಿದ್ದಾರೆ. ಆದುದರಿಂದ ಶಿಕ್ಷಣ ಸಂಸ್ಥೆಗಳು ಜಾತ್ಯತ್ಯೀತ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಕಲಿಸಬೇಕು ನೀಡಬೇಕು. ಆ ಕಾರ್ಯವನ್ನು ಬ್ಯಾರೀಸ್ ಸಂಸ್ಥೆ ಮಾಡುತ್ತಿರುವುದು ಸಂತೋಷ"

-ಯು.ಟಿ.ಖಾದರ್, ವಿಧಾನಸಭಾಧ್ಯಕ್ಷರು

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News