ಕರ್ವಾಲುವಿನಲ್ಲಿ ಗುಡ್ಡ ಕುಸಿತ: ಅಪಾಯದಲ್ಲಿ ವಿದ್ಯುತ್ ಟವರ್
ಉಡುಪಿ, ಜು.23: ಅಲೆವೂರು ಗ್ರಾಪಂ ವ್ಯಾಪ್ತಿಯ ಕರ್ವಾಲು ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ಕೆಮಾರು- ಮಣಿಪಾಲ ಮಾರ್ಗದ ವಿದ್ಯುತ್ ಟವರ್ ಅಪಾಯ ಸ್ಥಿತಿಯಲ್ಲಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೆಪಿಟಿಸಿಎಲ್ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರ್ವಾಲುವಿನಲ್ಲಿ ವಿದ್ಯುತ್ ಟವರ್ ಇರುವ ಗುಡ್ಡದ ಮಣ್ಣು ಜರಿದಿದ್ದು, ಇದರಿಂದ ಟವರ್ ಬೀಳುವ ಸ್ಥಿತಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್ ಮಂಗಳೂರು ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್, ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಅನಿಲ್ ಕುಮಾರ್, ಕಾರ್ಕಳ ಕೇಮಾರು ಕಾರ್ಯನಿರ್ವಹಕ ಅಭಿಯಂತರ ಶ್ರೀನಿವಾಸ್ ಪರಿಶೀಲನೆ ನಡೆಸಿದ್ದಾರೆ.
‘ಕೇಮಾರು- ಮಣಿಪಾಲ ಮಾರ್ಗದ ಈ ಟವರ್ ಬಿದ್ದರೆ ವಿದ್ಯುತ್ ಪೂರೈಕೆಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಅದಕ್ಕೆ ಬೇರೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತಿದ್ದೇವೆ. ಹಳೆಯ ಹಿರಿಯಡ್ಕ -ಮಣಿಪಾಲ ಸಿಂಗಲ್ ಸಕ್ಯುಟ್ ಲೈನ್ ಮೂಲಕ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತಿಸ ಲಾಗುತ್ತಿದೆ. ಎಲ್ಲಿಯಾದರೂ ಟವರ್ ಬಿದ್ದರೆ ವಿದ್ಯುತ್ ಸರಬರಾಜಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಟವರ್ ಕುಸಿಯದಂತೆ ತಡೆಯಲು ಯಾವುದೇ ಮಾರ್ಗಗಳಿಲ್ಲ. ಮಳೆ ಮುಂದುವರೆದರೆ ಮಣ್ಣು ಕುಸಿಯದಂತೆ ಟರ್ಪಾಲು ಹಾಕಲು ಯೋಚಿಸಲಾಗಿದೆ ಎಂದು ಕಾರ್ಯನಿರ್ವಹಕ ಅಭಿಯಂತರ ಶ್ರೀನಿವಾಸ್ ತಿಳಿಸಿದರು.