ಹಿಂದು ಸಮಾಜೋತ್ಸವ: ಉಡುಪಿಯಲ್ಲಿ ಪೊಲೀಸರಿಂದ ಪಥ ಸಂಚಲನ
Update: 2023-10-09 22:33 IST
ಉಡುಪಿ, ಅ.9: ಉಡುಪಿಯಲ್ಲಿ ಅ.10ರಂದು ನಡೆಯಲಿರುವ ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಪಥ ಸಂಚಲನವು ಇಂದು ಉಡುಪಿ ನಗರದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ನೇತೃತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜು ಸಮೀಪ ದಿಂದ ಹೊರಟ ಪಥ ಸಂಚಲನವು ಕಡಿಯಾಳಿ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ಸುಮಾರು 400 ಪೊಲೀಸ್ ಸಿಬ್ಬಂದಿ, 25 ಉಪನಿರೀಕ್ಷಕರು, ನಾಲ್ಕು ಕೆಎಸ್‌ಆರ್‌ಪಿ ತುಕಡಿ ಹಾಗೂ ನಾಲ್ಕು ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಈ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ದಿನಕರ್, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಪೊಲೀಸ್ ನಿರೀಕ್ಷಕರು ಗಳಾದ ಮಂಜಪ್ಪ, ಮಂಜುನಾಥ್, ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.