ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಬೃಹತ್ ಉದ್ಯೋಗ ಮೇಳ
ಉಡುಪಿ: ನಾಡಿನ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಆಕಾಂಕ್ಷಿಗಳಿಗೆ ಅತ್ಯುತ್ತಮ ಕಂಪೆನಿಗಳಲ್ಲಿ ಔದ್ಯೋಗಿಕ ನೆಲೆಯನು ಕಂಡುಕೊಳ್ಳಲು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2023’ ಈ ಬಾರಿ ಅಕ್ಟೋಬರ್ 6 ಹಾಗೂ 7ರಂದ ಮೂಡಬಿದರೆ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಪ್ರತಿಷ್ಠಾನವು ೨೦೦೭ರಿಂದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಯನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಷ್ಠಾನದ ಸಮುದಾಯ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಿಶೇಷ ಔದ್ಯೋಗಿಕ ನೆರವನ್ನು ನೀಡುತ್ತಿದೆ ಎಂದರು.
ಆಳ್ವಾಸ್ ಪ್ರಗತಿಯ ೧೩ನೇ ಆವೃತ್ತಿಯಲ್ಲಿ ನಾಡಿನ ಅತ್ಯುನ್ನತ ಔದ್ಯೋಗಿಕ ವಲಯಗಳೆಲ್ಲವುದರ ಅಗ್ರಗಣ್ಯ ಪ್ರಾತಿನಿಧಿಕ ಸಂಸ್ಥೆಗಳು ಮತ್ತು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಕಂಪೆನಿಗಳು ನೇಮಕಾತಿ ಮೂಲಕ ವಿವಿಧ ಪದವಿ, ಸ್ನಾತಕೋತ್ತರ ಪದವೀಧರರನ್ನು ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಮ್ಯಾನೇಜ್‌ಮೆಂಟ್, ಮೂಲ ವಿಜ್ಞಾನ, ನರ್ಸಿಂಗ್, ಐಟಿಐ, ಡಿಪೋಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಅಥವಾ ಎಸೆಸೆಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಿವೆ ಎಂದು ಪ್ರಸಾದ್ ಶೆಟ್ಟಿ ತಿಳಿಸಿದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್-www.alvaspragati.com- ನಲ್ಲಿ ನೋಡಬಹುದು. ಅಲ್ಲದೇ ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು-http://www.alvaspragati.com/candidateRegistrationPage#top -ನಲ್ಲಿ ಕಡ್ಡಾಯವಾಗಿ ಉಚಿತ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದವು ತಿಳಿಸಿದರು.
ಆಳ್ವಾಸ್ ಪ್ರಗತಿ 2023ರಲ್ಲಿ ಈವರೆಗೆ 165 ಕಂಪೆನಿಗಳು ನೊಂದಾಯಿಸಿ ಕೊಂಡಿದ್ದು, ಹೆಚ್ಚುವರಿಯಾಗಿ 37 ಕಂಪೆನಿಗಳು ಉದ್ಯೋಗಾವಕಾಶ ನೀಡಲಿದೆ. ಒಟ್ಟಾರೆಯಾಗಿ ಈ ಬಾರಿ 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ವಿವರಿಸಿದರು.
ಈ ಬಾರಿ ಕೊಲ್ಲಿ ರಾಷ್ಟ್ರಗಳಿಂದ ಮೂರು ಕಂಪೆನಿಗಳು ಭಾಗವಹಿಸುವುದನ್ನು ದೃಢಪಡಿಸಿವೆ. ಉಳಿದಂತೆ ಇಂಜಿನಿಯರಿಂಗ್‌ನಲ್ಲಿ 80ಕ್ಕೂ ಅಧಿಕ ಅಧಿಕ ಕಂಪೆನಿಗಳು, ಉತ್ಪಾದನಾ ವಲಯದಲ್ಲಿ 40+, ಐಟಿಯಲ್ಲಿ 18+ ಕಂಪೆನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇದೇ ಮೊದಲ ಬಾರಿ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸಂಪಾದಕೀಯ, ಮಾರುಕಟ್ಟೆ, ಪ್ರಸರಣ ಹಾಗೂ ಆಡಳಿತ ವಿಭಾಗಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ. ಖ್ಯಾತ ಅಟೋಮೊಬೈಲ್ ಕಂಪೆನಿಗಳು, ದೈತ್ಯ ನಿರ್ಮಾಣ ಸಂಸ್ಥೆಗಳು ಭಾಗವಹಿಸಲಿವೆ ಎಂದರು.
ಹೊರ ಜಿಲ್ಲೆಯಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅ.5ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9008907716, 9663190590, 7975223865ಯನ್ನು ಸಂಪರ್ಕಿಸಬಹುದು. ಮೇಳದಲ್ಲಿ ಭಾಗವಹಿಸಲು ಬರುವಾಗ ಅಭ್ಯರ್ಥಿಗಳು 5ರಿಂದ 10 ಪಾಸ್‌ಪೋರ್ಟ್ ಭಾವಚಿತ್ರಗಳು, ಅಂಕಪಟ್ಟಿಗಳು (ಛಾಯಾಪ್ರತಿಗಳು), ಆನ್‌ಲೈನ್ ನೋಂದಣಿಯ ನಂಬರ್ ಹಾಗೂ ಐಡಿಯನ್ನು ಹೊಂದಿರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪ್ರಗತಿಯ ಉತ್ಪಾದನಾ ವಲಯದ ಮುಖ್ಯಸ್ಥ ಶ್ರೀನಿವಾಸ್ ಸಿ.ಎಸ್., ಸಂಯೋಜಕ ನಿತಿನ್ ಕೆ.ಆರ್.ಉಪಸ್ಥಿತ ರಿದ್ದರು.