×
Ad

ಉಡುಪಿ: ಎಲ್ಲೈಸಿಯಿಂದ ಹಿರಿಯ ನಾಗರಿಕರಿಗೆ ನ್ಯಾಯಕೊಡಿಸಿದ ಮಾನವ ಹಕ್ಕು ಪ್ರತಿಷ್ಠಾನ

Update: 2025-05-31 22:59 IST

ಉಡುಪಿ: ವೃದ್ಧಾಪ್ಯದಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಎಲ್ಲೈಸಿಯಲ್ಲಿ ಠೇವಣಿ ಇರಿಸಿದ್ದ ಹಣವನ್ನು ಹಿಂದಿರುಗಿಸಲು ಹಿರಿಯ ನಾಗರಿಕರೊಬ್ಬರಿಗೆ ಅಡೆತಡೆಯೊಡ್ಡಿದಾಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಜಿಲ್ಲಾ ಬಳಕೆದಾರರ ನ್ಯಾಯಾಲಯದ ಮೂಲಕ ಅವರಿಗೆ ನ್ಯಾಯ ಒದಗಿಸಿ ಠೇವಣಿ ಇರಿಸಿದ ಸಂಪೂರ್ಣ ಹಣವನ್ನು ದಂಡ ಸಹಿತ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶಾನುಭಾಗ್, ಮೂಲತ ಕುಂದಾಪುರ ತಾಲೂಕು ಬೇಳೂರಿನ 83 ವರ್ಷ ಪ್ರಾಯದ ಅಣ್ಣಪ್ಪ ಪೂಜಾರಿ ಪ್ರತಿಷ್ಠಾನದ ಸಹಕಾರದೊಂದಿಗೆ ಒಂದು ವರ್ಷ ಹೋರಾಟದ ಬಳಿಕ ಜಿಲ್ಲಾ ಬಳಕೆದಾರರ ನ್ಯಾಯಾಲಯದಿಂದ ಸಂಪೂರ್ಣ ನ್ಯಾಯಪಡೆದ ಹಿರಿಯ ನಾಗರಿಕರು ಎಂದರು.

ಕೇವಲ ಮೂರನೇ ಕ್ಲಾಸ್ ಒದಿರುವ ಅಣ್ಣಪ್ಪ ಪೂಜಾರಿ ಜೀವನ ನಿರ್ವಹಣೆಗಾಗಿ ಹುಬ್ಬಳ್ಳಿಯಲ್ಲಿ ವಿವಿಧ ವ್ಯವಹಾರ ಮಾಡಿಕೊಂಡಿದ್ದರು. ಪಾರ್ಶ್ವವಾಯುವಿಗೆ ತುತ್ತಾದ ಬಳಿಕ 15 ವರ್ಷಗಳ ಹಿಂದೆ ಊರಿಗೆ ಬಂದು ಪತ್ನಿಯೊಂದಿಗೆ ವಾಸವಾಗಿದ್ದರು. ನಾಲ್ವರು ಮಕ್ಕಳಿದ್ದರೂ ಸ್ವಾವಲಂಬಿ ಬದುಕು ಸಾಗಿಸುತಿದ್ದ ಅವರು ವೃದ್ಧಾಪ್ಯದಿಂದಾಗಿ ಕುಂದಾಪುರದಲ್ಲಿ ತನ್ನ ಸ್ಥಿರಾಸ್ತಿಯನ್ನು ಮಾರಿ ಬಂದ ಹಣವನ್ನು ಠೇವಣಿ ಇರಿಸಿ ಅದರಿಂದ ಬರುವ ಆದಾಯದಿಂದ ಜೀವನ ನಡೆಸಲು ನಿರ್ಧರಿಸಿದ್ದರು.

ಅದರಂತೆ ಆಸ್ತಿ ಮಾರಿ ಬಂದ 30 ಲಕ್ಷ ರೂ.ಗಳನ್ನು ಸ್ನೇಹಿತರ ಸಲಹೆಯಂತೆ ಎಲ್‌ಐಸಿಯಲ್ಲಿ ಹೆಚ್ಚು ಆದಾಯ ಬರುವ ‘ಪ್ರಧಾನಮಂತ್ರಿ ವಯೋವಂದನಾ ಯೋಜನೆ’ಯಲ್ಲಿ ಇರಿಸಲು ನಿರ್ಧರಿಸಿ ಎಲ್ಲೈಸಿ ಏಜೆಂಟ್‌ರನ್ನು ಸಂಪರ್ಕಿಸಿದರು. ಕೇಂದ್ರ ಸರಕಾರದ ಈ ಸಬ್ಸಿಡಿ ಯೋಜನೆಯಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಠೇವಣಿಯನ್ನು ಹಿಂದಕ್ಕೆ ಪಡೆಯಲು ಅವಕಾಶವಿರುವುದನ್ನು ಖಾತ್ರಿ ಪಡಿಸಿಕೊಂಡು ತನ್ನ ಕೈಯಲ್ಲಿದ್ದ 30 ಲಕ್ಷರೂಗಳನ್ನು ಎಲ್ಲೈಸಿಯಲ್ಲಿ ತೊಡಗಿಸಲು ನಿರ್ದರಿಸಿದರು ಎಂದರು.

ಕೆಲವೇ ದಿನಗಳಲ್ಲಿ ಅವರು ತಲಾ 15 ಲಕ್ಷ ರೂ.ಗಳ ಎರಡು ಪಾಲಿಸಿಗಳನ್ನು ಪಡೆದರು. ಅನಕ್ಷರಸ್ಥ ಅಣ್ಣಪ್ಪ ಪೂಜಾರಿಗೆ ಇಂಗ್ಲೀಷ್‌ನಲ್ಲಿದ್ದ ಪಾಲಿಸಿಯ ನಿಬಂಧನೆಗಳನ್ನು ಓದಲು ಸಾಧ್ಯವಿರಲಿಲ್ಲ. ಆದರೆ ಪ್ರತಿ ತಿಂಗಳು ಒಂದು ಪಾಲಿಸಿಯಿಂದ 9,250ರೂ. ಹಾಗೂ ಇನ್ನೊಂದರಿಂದ 6519ರೂ. ಬಡ್ಡಿ ಬಂದಾಗ ಅವರನ್ನು ಏಜೆಂಟ್ ಬಳಿ ಈ ಬಗ್ಗೆ ವಿಚಾರಿಸಿದರೂ ಯಾವುದೇ ಉತ್ತರ ಸಿಕ್ಕಿರಲಿಲ್ಲ.

ಕೆಲ ಸಮಯದ ಬಳಿಕ ಪಾರ್ಶ್ವವಾಯುವಿನ ಜೊತೆಗೆ ಪಾರ್ಕಿನ್ಸನ್ ರೋಗ ದಿಂದಲೂ ಬಾಧಿತರಾದಾಗ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಂದು ಠೇವಣಿಯನ್ನು ಹಿಂಪಡೆಯಲು ನಿರ್ಧರಿಸಿದರು. ತಿಂಗಳು ಕಳೆದರೂ ಅವರ ಪ್ರಯತ್ನ ವಿಫಲವಾದಾಗ, 2023ರ ಜನವರಿ ತಿಂಗಳಲ್ಲಿ ಪತ್ರ ಬರೆದು ತಮ್ಮ ಎರಡನೇ ಠೇವಣಿಯನ್ನು ಹಿಂದಿರುಗಿಸುವಂತೆ ಕೋರಿಕೊಂಡರು.

ಅಣ್ಣಪ್ಪ ಪೂಜಾರಿ ಅವರ ಪತ್ರಕ್ಕೆ ಉತ್ತರಿಸಿದ ಎಲ್ಲೈಸಿ, 2021ರ ಸೆ.6ಕ್ಕೆ ಖರೀದಿಸಿದ 15 ಲಕ್ಷ ರೂ.ಗಳ ಪಾಲಿಸಿಯ ಮೌಲ್ಯ 10,73,412ಗೂ ಇಳಿದಿದೆ ಎಂದು ತಿಳಿಸಿ ಅದನ್ನು ಹಿಂದಿರುಗಿಸಲಾಗುವುದು ಎಂದಿತ್ತು. ಇದರಿಂದ ತಮ್ಮದಲ್ಲದ ತಪ್ಪಿಗೆ ಅವರು 16 ತಿಂಗಳಲ್ಲಿ 4,26,586ರೂ.ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಈ ಮಾಹಿತಿಯನ್ನು ಎಲ್ಲೈಸಿ ಪೂಜಾರಿ ಅವರಿಗೆ ನೀಡಿಯೇ ಇರಲಿಲ್ಲ.

ತಮಗೆ ಜೀವನಾಧಾರವಾಗಿದ್ದ, ಚಿಕಿತ್ಸೆಗೆ ತುರ್ತು ಅಗತ್ಯವಿದ್ದ ಹಣವನ್ನು ಕಳೆದುಕೊಳ್ಳಲು ಇಚ್ಛಿಸದ ಅಣ್ಣಪ್ಪ ಪೂಜಾರಿ ಉಡುಪಿಯಲ್ಲಿ ಮಾನವ ಹಕ್ಕು ಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ನೆರವು ಯಾಚಿಸಿದರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಪ್ರತಿಷ್ಠಾನ ಜಿಲ್ಲಾ ಬಳಕೆದಾರರ ನ್ಯಾಯಾಲಯದದಲ್ಲಿ ದೂರು ದಾಖಲಿಸಲು ನಿರ್ಧರಿಸಿತು ಎಂದು ಡಾ. ರವೀಂದ್ರನಾಥ ಶಾನುಭಾಗ್ ವಿವರಿಸಿದರು.

ವಿಚಾರಣೆಯ ವೇಳೆ 15 ಲಕ್ಷರೂ.ನ ಮೊದಲ ಪಾಲಿಸಿಯನ್ನು ಕೇಂದ್ರ ಸರಕಾರದ ಸಬ್ಸಿಡಿ ಯೋಜನೆ ಆಧಾರದಲ್ಲಿ ನೀಡಿದ್ದು, ಎರಡನೇ ಪಾಲಿಸಿಯನ್ನು ಎಲ್ಲೈಸಿಯ ‘ಜೀವನ್ ಆಕ್ಷಯ್’ ಯೋಜನೆಯಡಿ ಠೇವಣಿ ಇರಿಸಲಾಗಿತು ಎಂದು ಬಹಿರಂಗ ಪಡಿಸಿತು.ಇದರಲ್ಲಿ ಸಿಗುವ ಮಾಸಿಕ ಬಡ್ಡಿ ಕಡಿಮೆ ಮಾತ್ರವಲ್ಲ, ಠೇವಣಿಯನ್ನು ಹಿಂದಕ್ಕೆ ಪಡೆಯುವ ಅವಕಾಶವೇ ಇರಲಿಲ್ಲ ಎಂಬುದು ಗೊತ್ತಾಯಿತು ಎಂದು ಡಾ.ಶಾನುಭಾಗ್ ತಿಳಿಸಿದರು.

ವಿಚಾರಣೆ ನಡೆಸಿದ ಜಿಲ್ಲಾ ಬಳಕೆದಾರರ ನ್ಯಾಯಾಲಯ ಮೇ 21ರಂದು ಅಣ್ಣಪ್ಪ ಪೂಜಾರಿ ಪರವಾಗಿ ತೀರ್ಪು ನೀಡಿದ್ದು, ಪಾಲಿಸಿಗಾಗಿ ನೀಡಿದ ಸಂಪೂರ್ಣ ಹಣವನ್ನು (15 ಲಕ್ಷ ರೂ.) ಹಿಂದಿರುಗಿಸುವುದು ಮಾತ್ರವಲ್ಲದೇ ದಾವೆಯ ಖರ್ಚು ಹಾಗೂ ಹಿರಿಯ ವ್ಯಕ್ತಿಗಾದ ಮಾನಸಿಕ ಹಿಂಸೆಗಾಗಿ ಒಟ್ಟು 20,000ರೂ.ಗಳನ್ನು 45 ದಿನದೊಳಗೆ ಪಾವತಿಸುವಂತೆ ಎಲ್ಲೈಸಿಗೆ ಆದೇಶಿಸಿದೆ ಎಂದ ಡಾ.ಶಾನುಭಾಗ್, ಇದೇ ರೀತಿಯಲ್ಲಿ ಇನ್ನೂ ಅನೇಕರು ವಂಚನೆಗೊಳಗಾದ ಮಾಹಿತಿ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಣ್ಣಪ್ಪ ಪೂಜಾರಿ ಹಾಗೂ ಪ್ರತಿಷ್ಠಾನದ ಕಾರ್ಯದರ್ಶಿ ಅನಿಲ್ ದೇವಾಡಿಗ ಉಪಸ್ಥಿತರಿದ್ದರು.

ವಯೋವಂದನಾ ಯೋಜನೆ ಮಾಹಿತಿ

ಹಿರಿಯ ನಾಗರಿಕರಿಗಾಗಿಯೇ ಕೇಂದ್ರ ಸರಕಾರ ರೂಪಿಸಿರುವ ಯೋಜನೆ ‘ಪ್ರಧಾನಮಂತ್ರಿ ವಯೋವಂದನಾ ಯೋಜನೆ’ 2017ರಲ್ಲಿ ಜಾರಿಗೆ ಬಂದಿದೆ. ಕೇಂದ್ರ ಸರಕಾರದ ಸಬ್ಸಿಡಿ ನೆರವಿನಿಂದ ನಡೆಯುತ್ತಿರುವ ಈ ಯೋಜನೆಯಲ್ಲಿ ಠೇವಣಿಗೆ ಬ್ಯಾಂಕಿನಿಂದ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ.

ಹಿರಿಯ ನಾಗರಿಕರು ಗರಿಷ್ಠವೆಂದರೆ 15 ಲಕ್ಷ ರೂ.ವರೆಗೆಗೆ 10 ವರ್ಷಗಳ ಕಾಲ ಠೇವಣಿಯಲ್ಲಿ ಈ ಯೋಜನೆಯಲ್ಲಿ ಇಡಬಹುದಾಗಿದ್ದು, ಪಾಲಿಸಿದಾರ ಮೃತರಾದರೆ ಬದುಕಿರುವ ಗಂಡ ಅಥವಾ ಹೆಂಡತಿ ಪಾಲಿಸಿಯನ್ನು ಮುಂದುವರಿಸಬಹುದು. ಅಥವಾ ನಾಮಿನಿಗೆ ಪಾಲಿಸಿ ನೀಡಲಾಗುವುದು. ಪ್ರಸ್ತುತ ಠೇವಣಿ ಮೊತ್ತವನ್ನು 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.

ಪ್ರಸ್ತುತ ಇಂತಹದೇ ಯೋಜನೆಯೊಂದನ್ನು- ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್-ಅಂಚೆ ಇಲಾಖೆ ಅನುಷ್ಠಾನಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News