×
Ad

‘ಹೊಸ ಮಾಧ್ಯಮ’ದಿಂದ ಅಭಿವೃದ್ಧಿ ಮೇಲೆ ಪರಿಣಾಮ: ಪ್ರೊ.ಸಂಜಯ್

Update: 2023-09-29 20:04 IST

ಮಣಿಪಾಲ: ಹೊಸ ಮಾಧ್ಯಮ ಹಾಗೂ ನೆಟ್‌ವರ್ಕ್ ಸೊಸೈಟಿ ಪ್ರವರ್ಧಮಾನಕ್ಕೆ ಬರುತಿದ್ದು, ಇದರಿಂದ ಅಭಿವೃದ್ಧಿ ಸಂವಹನದ ದಾರಿಯನ್ನೇ ಬದಲಾಗಿದೆ. ಹೊಸ ಮಾಧ್ಯಮವು ನೆಟ್‌ವರ್ಕ್ ಸೊಸೈಟಿಯ ಬೆಳವಣಿಗೆಯನ್ನು ಸುಗಮ ಗೊಳಿಸಿ ‘ಅಭಿವೃದ್ಧಿ’ ಕುರಿತ ಚರ್ಚೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಮಿಳುನಾಡಿನ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಬಿ.ಪಿ.ಸಂಜಯ್ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ ಅಂಡ್ ಸಾಯನ್ಸ್‌ನಲ್ಲಿ ‘ಅಭಿವೃದ್ಧಿಯ ಸಂವಹನ’ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದ ಪ್ರೊ.ಸಂಜಯ್, ಈ ಅಭಿವೃದ್ಧಿ ಸಂವಹನ ಕುರಿತ ಚರ್ಚೆ, ವಸಾಹತುಶಾಹಿ, ರಾಷ್ಟ್ರೀಯತೆ ಮತ್ತು ಸಮೂಹ ಮಾಧ್ಯಮಗಳ ಮೂಲಕ ಹಾದುಹೋಗಿವೆ. ಪ್ರಸ್ತುತ ಈಗಿರುವುದು ನೆಟ್‌ ವರ್ಕ್ ಸೊಸೈಟಿ ಯುಗ. ಇದು ಬಹುಮುಖಿ ಅಭಿಪ್ರಾಯಗಳನ್ನು ಪ್ರೋತ್ಸಾಹಿಸಿದೆ. ಅಭಿವೃದ್ಧಿ ಕುರಿತಂತೆ ಅನೇಕ ದೃಷ್ಟಿಕೋನಗಳಿವೆ. ಸದ್ಯಕ್ಕೆ ‘ಸುಸ್ಥಿರ ಅಭಿವೃದ್ಧಿ’ ಎಂಬ ಕಲ್ಪನೆ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಅಭಿವೃದ್ಧಿಯಲ್ಲಿ ಇನ್ನೂ ಅನೇಕ ಮಾದರಿಗಳಿವೆ. ಗಾಂಧಿ, ಬೌದ್ಧ ಮತ್ತು ಇಸ್ಲಾಮಿಕ್ ಮಾದರಿಗಳಂತಹ ಅಭಿವೃದ್ಧಿಯ ಇತರ ಮಾದರಿಗಳು ಇದ್ದು, ಸಮಾಜವಾದಿ ದೃಷ್ಟಿಕೋನದೊಂದಿಗೆ ಬಂಡವಾಳಶಾಹಿ ಸಂತೋಷವನ್ನು ಹುಡುಕುವುದು ಚರ್ಚೆಯ ಪ್ರಮುಖ ಅಂಶವಾಗಿದೆ ಎಂದರು.

ಅಭಿವೃದ್ಧಿಯ ಫಲಗಳು ಎಲ್ಲರನ್ನೂ ಸಮಾನವಾಗಿ ತಲುಪಿಲ್ಲ ಎಂಬ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರೊ.ಸಂಜಯ್, ಬೆಳವಣಿಗೆಯಲ್ಲಿ ಸಮಾನತೆಯನ್ನು ಸಾಧಿಸಲು ನಮಗೆ ಸಾಧ್ಯವಾಗಿಲ್ಲ ಎಂದರು. ಇದೇ ವೇಳೆ ಸಮಾಜಕ್ಕೆ ಚಿಂತಕರ ಅಗತ್ಯವಿಲ್ಲ ಎಂಬ ಭಾವನೆಯೊಂದಿಗೆ ಮುಕ್ತ ಕಲೆ ಹಾಗೂ ಸಮಾಜ ವಿಜ್ಞಾನ ಅಧ್ಯಯನವನ್ನು ಕಡೆಗಣಿಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ಅಭಿವೃದ್ಧಿಯ ಪರ್ಯಾಯ ಮಾದರಿಗಳ ಅಗತ್ಯವನ್ನು ಒತ್ತಿ ಹೇಳಿದರು. ನಮ್ಮೆಲ್ಲಾ ಚರ್ಚೆಗಳಲ್ಲಿ ಮೂಲಭೂತ ಮಾನವ ಅಭಿವೃದ್ಧಿ ಸೂಚ್ಯಂಕಗಳಿಗೆ ಹೆಚ್ಚಿನ ಒತ್ತು ನೀಡಬೇಕಾ ಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರೊ.ಮುರಳೀಧರ ಉಪಾಧ್ಯಾಯ, ಲೇಖಕಿ ಜ್ಯೋತಿ ಮಹದೇವ್,ಪರಿಸರ ತಜ್ಞ ಡಾ.ಶ್ರೀಕುಮಾರ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News