×
Ad

ಯಕ್ಷಗಾನ ಪರಿಪೂರ್ಣ ಕಲಾಪ್ರಕಾರ: ಪ್ರಮೋದ್ ಮಧ್ವರಾಜ್

ಬ್ರಹ್ಮಾವರದಲ್ಲಿ ಕಿಶೋರ ಯಕ್ಷ ಸಂಭ್ರಮ ಸಮಾರೋಪ

Update: 2025-12-02 20:12 IST

ಬ್ರಹ್ಮಾವರ: ಯಕ್ಷಗಾನ ಸವಾರ್ಂಗ ಸುಂದರ ಕಲೆ. ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶಗಳೂ ಪೂರ್ಣ ಪ್ರಮಾಣದಲ್ಲಿ ವಿಕಾಸ ಹೊಂದಿರುವ ಏಕೈಕ ಕಲಾಪ್ರಕಾರ ಯಕ್ಷಗಾನ. ಹಿಂದೆ ಶಾಲೆಗೇ ಹೋಗದ ಕಲಾವಿದರು ಸಮಾಜ ತಿದ್ದುವ ಕೆಲಸವನ್ನು ಯಕ್ಷಗಾನದ ಮೂಲಕ ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್, ಯಕ್ಷಶಿಕ್ಷಣ ಮಹಾಭಿಯಾನದ ಅಂಗವಾಗಿ ಬ್ರಹ್ಮಾವರದಲ್ಲಿ ಆಯೋಜಿಸಿದ್ದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.

ಯಕ್ಷಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರೌಢ ಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭಿಸಲು ಕಾರಣವಾದ ಸಂಗತಿಗಳು ಹಾಗೂ ಅದರಿಂದ ಆದ ಪ್ರಯೋಜನಗಳನ್ನು ವಿವರಿಸಿ, ಅಭಿಯಾನದ ಯಶಸ್ಸಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಕೊಡುಗೆ ಅಗಾಧವಾಗಿದೆ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ಮಹೇಶ್ವರಿ, ಲಾಸ್ಯ, ದಿಗ್ಗಜ್ ಡಿ. ಶೆಟ್ಟಿ, ನವ್ಯಾ ಹಾವಂಜೆ, ತನುಶ್ರೀ ಯಕ್ಷಶಿಕ್ಷಣದಿಂದ ತಮಗಾದ ಧನಾತ್ಮಕ ಪ್ರಯೋಜನ ಮತ್ತು ಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು. ಪ್ರಸಾಧನ ತಂಡದ ನೇತೃತ್ವ ವಹಿಸಿದ್ದ ದ ಕೃಷ್ಣಸ್ವಾಮಿ ಜೋಶಿ ಮತ್ತು ಮಿಥುನ ನಾಯಕ್‌ರನ್ನು ಶಾಲು ಹೊದಿಸಿ ಗೌರವಿಸಲಾುತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಿನಕರ ಹೇರೂರು, ರಾಜು ಕುಲಾಲ, ಬೈಕಾಡಿ ಸುಪ್ರಸಾದ ಶೆಟ್ಟಿ, ಎಂ.ಗಂಗಾಧರ ರಾವ್, ಸತೀಶ್ ಶೆಟ್ಟಿ, ಚಂದ್ರಶೇಖರ ಎಂ. ನಾಯರಿ, ಶ್ರೀಧರ್ ಬಿ. ಶೆಟ್ಟಿ, ದಿನೇಶ್ ನಾಯರಿ, ಗುರುರಾಜ ರಾವ್ ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳಲ್ಲಿ ಕಿಶೋರ ಯಕ್ಷಗಾನ ಸಂಭ್ರಮದ ಯಶಸ್ಸಿನಲ್ಲಿ ಬ್ರಹ್ಮಾವರ ಸಂಘಟನಾ ಸಮಿತಿಯ ಪರಿಶ್ರಮವನ್ನು ಶ್ಲಾಘಿಸಿದರು. ಇದೇ ವೇಳೆ ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಟ್ರಸ್ಟಿನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು. ಕಲಾರಂಗದ ಸದಸ್ಯರಾದ ಎಸ್.ವಿ.ಭಟ್, ನಾರಾಯಣ ಎಂ. ಹೆಗಡೆ, ಡಾ. ರಾಜೇಶ್ ನಾವುಡ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಎಚ್. ಎನ್. ವೆಂಕಟೇಶ ಉಪಸ್ಥಿತರಿದ್ದರು.

ದಿನದಲ್ಲಿ ನಾಲ್ಕೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ವರಾನ್ವೇಷಣೆ’ ಹಾಗೂ ಬ್ರಹ್ಮಾವರ ಎಸ್.ಎಂ.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಗಯಾಭಯ’ ಯಕ್ಷಗಾನ ಪ್ರದರ್ಶನ ನೀಡಿದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News