×
Ad

ಸೌಜನ್ಯ ಕುಟುಂಬಕ್ಕೆ ನ್ಯಾಯ, ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಕೆಆರ್‌ಎಸ್ ಪಕ್ಷದ ಪಾದಯಾತ್ರೆ

Update: 2023-08-24 21:50 IST

ಉಡುಪಿ, ಆ.24: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 12 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ದಾರುಣವಾಗಿ ಕೊಲೆಯಾದ ಸೌಜನ್ಯ ಎಂಬ 17 ವರ್ಷದ ಯುವತಿಯ ಪರವಾಗಿ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ವತಿಯಿಂದ ಅಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ಆ.26ರಿಂದ ಬೆಳ್ತಂಗಡಿಯಿಂದ ಬೆಂಗಳೂರುವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಿರಣ್‌ ಕುಮಾರ್ ಪೆರ್ಡೂರು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿ ಬಂಧನಕ್ಕೊಳಗಾದ ಸಂತೋಷ್‌ರಾವ್ ಎಂಬವರು ನಿರಪರಾಧಿ ಎಂದು ನ್ಯಾಯಾಲಯ ಇತ್ತೀಚೆಗೆ ಆರೋಪಮುಕ್ತ ಗೊಳಿಸಿದ ಹಿನ್ನೆಲೆಯಲ್ಲಿ ನಾಡಿನ ಜನತೆ ಈಗ ಆಕ್ರೋಶ ಕ್ಕೊಳಗಾಗಿದ್ದು, ಸೌಜನ್ಯ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಪ್ರತಿಭಟನೆ, ಹೋರಾಟ ನಡೆಸುತಿದ್ದಾರೆ ಎಂದವರು ಹೇಳಿದರು.

ಈ ಹಿನ್ನೆಲಯಲ್ಲಿ ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲು ಹಾಗೂ ಅಪರಾಧ ಕೃತ್ಯ ಎಸಗಿದ ವರನ್ನು ಕಾನೂನಿನ ವ್ಯಾಪ್ತಿಗೆ ತರಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹಾಗೂ ಈ ಬಗ್ಗೆ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಲು ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಕೆಆರ್‌ಎಸ್ ಪಕ್ಷ ಹೋರಾಟಕ್ಕಿಳಿಯಲಿದೆ ಎಂದರು.

ಇದಕ್ಕಾಗಿ ಆ.26ರಿಂದ ಬೆಳ್ತಂಗಡಿಯಿಂದ ಪ್ರಾರಂಭಿಸಿ ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿ ಕೊಳ್ಳಲಾಗಿದೆ. ಈ ಪಾದಯಾತ್ರೆ ಸೆ.7ರಂದು ಬೆಂಗಳೂರು ತಲುಪಿ ಮರುದಿನ ಸೆ.8ರಂದು ವಿಧಾನಸೌಧ ಮುಟ್ಟಲಿದೆ ಎಂದರು.14 ದಿನಗಳ ಕಾಲ ನಡೆಯುವ ಸುಮಾರು 330ಕಿ.ಮೀ. ಪಾದಯಾತ್ರೆಯಲ್ಲಿ ಕೆಆರ್‌ಎಸ್ ಪಕ್ಷ ರಾಜ್ಯ ಸರಕಾರದ ಮುಂದೆ ಹಲವು ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಲಿದೆ ಎಂದವರು ವಿವರಿಸಿದರು.

ಸೌಜನ್ಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಮರು ತನಿಖೆಗೆ ಆದೇಶಿಸಬೇಕು. ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಪೊಲೀಸ್ ತನಿಖಾ ತಂಡವನ್ನು ರಚಿಸಿ ಹಿಂದಿನ ತನಿಖಾ ತಂಡವನ್ನು ತನಿಖೆಗೆ ಒಳಪಡಿಸಬೇಕು. ಇಂಥ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇವು ಪಕ್ಷದ ಪ್ರಮುಖ ಹಕ್ಕೊತ್ತಾಯ ಗಳಾಗಿವೆ ಎಂದರು.

ಪ್ರಕರಣದಲ್ಲಿ ನಿರಪರಾಧಿಯಾಗಿರುವ ಸಂತೋಷ್‌ರಾವ್ ಮತ್ತವರ ಕುಟುಂಬದ ವಿರುದ್ಧ ಸುಳ್ಳು ಕೇಸು ದಾಖಲಿಸಿ ಜೈಲು ಶಿಕ್ಷೆಗೆ ಗುರಿ ಮಾಡಿದ ಪೊಲೀಸರಿಂದ ಆ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಬೇಕು ಎಂದು ಸರಕಾರ ಹಾಗೂ ನ್ಯಾಯಲಯವನ್ನು ಕೋರಲಾಗುವುದು ಎಂದವರು ತಿಳಿಸಿದರು.

ಪಾದಯಾತ್ರೆಯಲ್ಲಿ ಉಡುಪಿ ಜಿಲ್ಲೆಯಿಂದ 30 ಮಂದಿಯ ತಂಡ ಭಾಗವಹಿಸಲಿದೆ ಎಂದೂ ಕಿರಣ್‌ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿ ಯಲ್ಲಿ ಪಕ್ಷದ ಪದಾಧಿಕಾರಿಗಳಾದ ಸದಾಶಿವ ಕೋಟೇಕಾರ್ ಕುಂದಾಪುರ, ಇಕ್ಬಾಲ್ ಕುಂಜಿಬೆಟ್ಟು, ರಾಜು ಕುಂದಾಪುರ, ರಕ್ಷಿತ್ ಶೆಟ್ಟಿ, ದೇವೇಂದ್ರ ಸುವರ್ಣ ವಡ್ಡರ್ಸೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News