ಅ.29ರಂದು ದುಬೈಯಲ್ಲಿ ಕುಂದಗನ್ನಡ ಉತ್ಸವ -2023
ಕುಂದಾಪುರ, ಅ.17: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇವರ ಆಶ್ರಯದಲ್ಲಿ ಕುಂದಗನ್ನಡ ಉತ್ಸವ 2023 ಕಾರ್ಯ ಕ್ರಮ ಅ.29ರಂದು ದುಬೈನ ಅಜ್ಮಾನ್ ನಲ್ಲಿ ನಡೆಯಲಿದೆ ಎಂದು ನಮ್ಮ ಕುಂದಾಪ್ರ ಕನ್ನಡ ಬಳಗದ ಉಪಾಧ್ಯಕ್ಷ ಶೀನ ದೇವಾಡಿಗ ತಿಳಿಸಿದ್ದಾರೆ.
ತ್ರಾಸಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದುಬೈನಲ್ಲಿರುವ ಕುಂದಗನ್ನಡಿಗರ ಸಹಾಯ ಹಾಗೂ ತಾಲೂಕಿನ ಶೈಕ್ಷಣಿಕ ಸಾಮಾಜಿಕ ,ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಜಾತಿ, ಬೇಧವಿಲ್ಲದೆ ನೆರವಾಗುವ ಉದ್ದೇಶದಿಂದ ಹುಟ್ಟಿಕೊಂಡಿರುವ ಈ ಸಂಸ್ಥೆ ಪ್ರತಿವರ್ಷ ಶೈಕ್ಷಣಿಕ ಸಹಾಯ, ಗ್ರಾಮೀಣ ಭಾಗದ ಸಂಸ್ಥೆಗಳಿಗೆ ಕೊಡುಗೆ, ಕುಂದಾಪ್ರ ದಿನಾಚರಣೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ವರ್ಷ ದುಬೈನಲ್ಲಿ ಕುಂದ ಗನ್ನಡ ಉತ್ಸವ ಆಯೋಜಿಸಲಾಗಿದೆ ಎಂದರು.
ರಘುರಾಮ ದೇವಾಡಿಗ ಮಾತನಾಡಿ ಪ್ರಥಮ ಬಾರಿಗೆ ನಮ್ಮ ಕುಂದಾಪ್ರ ಕನ್ನಡ ಬಳಗದ ವತಿಯಿಂದ ದುಬೈನಲ್ಲಿ ಮಂದಾರ್ತಿ ಮೇಳದ ಯಕ್ಷಗಾಗ ಈ ವರ್ಷದ ಕುಂದಗನ್ನಡ ಉತ್ಸವದಲ್ಲಿ ನಡೆಯಲಿದೆ. ಪಡುಕೋಣೆಯ ನಾಟಿ ವೈದ್ಯ ಮ್ಯಾಕ್ಸಿಮ್ ಒಲಿವೆರಾ, ಸಮಾಜ ಸೇವಕ ಸಂಜೀವ ದೇವಾಡಿಗ ಹಾಗೂ ಜೀವರಕ್ಷಕ ಮುಳುಗುತಜ್ಞ ದಿನೇಶ್ ಖಾರ್ವಿ ಅವರಿಗೆ ಕುಂದಾಪ್ರ ಕನ್ನಡರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಅರುಣ್ ಕುಮಾರ್ ಶಿರೂರು, ಬಳಗದ ಸದಸ್ಯರಾದ ಶೀನ ದೇವಾಡಿಗ, ಸುಧಾಕರ ಆಚಾರ್ಯ, ತಮ್ಮಯ್ಯ ದೇವಾಡಿಗ ಉಪಸ್ಥಿತರಿದ್ದರು.