×
Ad

ವೈದ್ಯಕೀಯ ತಪಾಸಣೆ ಬಹಿಷ್ಕರಿಸಲು ಕಾರ್ಮಿಕ ಸಂಘಟನೆಗಳ ಕರೆ

Update: 2023-11-22 21:26 IST

ಉಡುಪಿ, ನ.22: ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹಣವಿಲ್ಲ ಎಂದು ಕಾರ್ಮಿಕರ ಪ್ರತಿಯೊಂದು ಬೇಡಿಕೆಗೂ ಸಬೂಬು ಹೇಳುವ ಕಾರ್ಮಿಕ ಸಚಿವರು, ಇದೀಗ ಖಾಸಗಿ ಆಸ್ಪತ್ರೆಗಳಿಗೆ ಕಾರ್ಮಿಕರ ವೈದ್ಯಕೀಯ ತಪಾಸಣೆ ನಡೆಸಲು ಆದೇಶ ಹೊರಡಿಸಿದ್ದಾರೆ. ಇದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಾಗಿದೆ ಎಂದು ಸಿಡಬ್ಲ್ಯುಎಫ್‌ಐನ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಲ್ಲಿ ವೈದ್ಯ ಕೀಯ ತಪಾಸಣೆಯ ಹೆಸರಿನಲ್ಲಿ ಕೋಟ್ಯಾಂತರ ರೂ. ಕಲ್ಯಾಣ ಮಂಡಳಿಯಲ್ಲಿದ್ದ ಹಣವನ್ನು ಹಿಂದಿನ ಬಿಜೆಪಿ ಸರಕಾರ ಪೋಲು ಮಾಡಿದೆ. ಇದರಿಂದ ಸಾಮಾನ್ಯ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಹೀಗೆ ಮಾಡಿದ ತಪಾಸಣಾ ವರದಿಯನ್ನು ಹೆಚ್ಚಿನ ಕಾರ್ಮಿಕರಿಗೆ ನೀಡಿಲ್ಲ. ನೀಡಿದವರ ವರದಿಯನ್ನು ಉಳಿದ ಆಸ್ಪತ್ರೆಗಳು ತಿರಸ್ಕರಿಸಿವೆ. ಇಲಿ ಜ್ವರದಂಥ ಗಂಭೀರ ಕಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಲಕ್ಷಾಂತರ ರೂ. ಬಿಲ್ ಪಡೆದ ಬಡ ಕಾರ್ಮಿಕನ ಚಿಕಿತ್ಸಾ ವೆಚ್ಚವನ್ನು ಕಲ್ಯಾಣ ಮಂಡಳಿ, ರೋಗ ಪಟ್ಟಿಯಲ್ಲಿಲ್ಲ ಎಂದು ತಿರಸ್ಕರಿಸಿದೆ. ಹೀಗಾಗಿ ಕಾರ್ಮಿಕರ ವೈದ್ಯಕೀಯ ತಪಾಸಣೆ ಎಂಬುದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರಮಾತ್ರ. ಆದುದರಿಂದ ಎಲ್ಲಾ ಕಾರ್ಮಿ ಕರು ಈ ವೈದ್ಯಕೀಯ ತಪಾಸಣೆಯನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ ಎಂದರು.

1996ರ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾಯ್ದೆ ಅಡಿಯಲ್ಲಿ ರಚಿತವಾದ ಕಲ್ಯಾಣ ಮಂಡಳಿಯಲ್ಲಿ ಬೋಗಸ್ ಕಾರ್ಡ್‌ಗಳು ಹೆಚ್ಚಿವೆ ಎಂಬ ನೆಪವೊಡ್ಡಿ, ಬಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುತಿದ್ದ ವಿದ್ಯಾರ್ಥಿ ವೇತನವನ್ನು ಶೇ.75 ರಿಂದ 80ರಷ್ಟು ಕಡಿತ ಮಾಡಿರುವ ಕಲ್ಯಾಣ ಮಂಡಳಿ ನಿರ್ಧಾರವನ್ನು ಸಿಐಟಿಯು ಹಾಗೂ ಎಐಟಿಯುಸಿಗೆ ಸೇರಿದ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಗಳು ಖಂಡಿಸುತ್ತವೆ ಎಂದು ಸಿಐಟಿಯು ನಾಯಕ ಸುರೇಶ್ ಕಲ್ಲಾಗರ ಹೇಳಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಗುವ ಶೈಕ್ಷಣಿಕ ಧನಸಹಾಯವನ್ನು ಈ ಬಾರಿ ತೀವ್ರವಾಗಿ ಕಡಿತಗೊಳಿಸಲಾಗಿದೆ. ಕಲ್ಯಾಣಮಂಡಳಿಯಲ್ಲಿ ಸೆಸ್ ಸಂಗ್ರಹದಿಂದ ಇದ್ದ 13,000 ಕೋಟಿ ರೂ. ಬಿಜೆಪಿ ಸರಕಾರದ ಅವಧಿಯಲ್ಲಿ 6,500 ಕೋಟಿ ರೂ.ಇಳಿದ ಕಾರಣ ಸ್ಕಾಲರ್‌ಶಿಪ್ ಮೊತ್ತವನ್ನು ಕಡಿತ ಮಾಡುತ್ತಿರುವುದಾಗಿ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ ಎಂದರು.

ಇದರಿಂದ ಈ ಹಣವನ್ನೇ ನಂಬಿ ಇಂಜಿನಿಯರಿಂಗ್, ಮೆಡಿಕಲ್, ಉನ್ನತ ಶಿಕ್ಷಣ ಪಡೆಯುತ್ತಿರುವ ಬಡ ಕಟ್ಟಡ ಕಾರ್ಮಿಕ ಮಕ್ಕಳು ದಿಕ್ಕೇ ತೋಚದಂತಾಗಿದ್ದಾರೆ.ವೈದ್ಯಕೀಯ ಪದವಿಗೆ ಪ್ರತಿ ವರ್ಷ ಸಿಗುತಿದ್ದ 60,000 ಮೊತ್ತವನ್ನು 11,000ಕ್ಕೆ, ಇಂಜಿನಿಯರಿಂಗ್ ವಿದ್ಯಾರ್ಥಿಯ 50ಸಾವಿರ ರೂ. ಮೊತ್ತವನ್ನು 10ಸಾವಿರ ರೂ.ಗಳಿಗೆ ಇಳಿಸಲಾಗಿದೆ. ಪದವಿ ವಿದ್ಯಾ ರ್ಥಿಗೆ ಸಿಗುತಿದ್ದ 25,000 ರೂ.ಈಗ 6,000ರೂ.ಗೆ ಇಳಿದಿದೆ. ಇದು ತೀರಾ ವೈಜ್ಞಾನಿಕ ಎಂದು ಸುರೇಶ್ ಕಲ್ಲಾಗರ ತಿಳಿಸಿದರು.

ಸ್ಕಾಲರ್‌ಶಿಪ್‌ಗೆ ಹಣವಿಲ್ಲ ಎನ್ನುವ ಸರಕಾರ 70 ಕೋಟಿ ರೂ.ನೀಡಿ ಲ್ಯಾಪ್‌ಟಾಪ್ ಖರೀದಿಸಿದೆ. ಕಲ್ಯಾಣ ಮಂಡಳಿ ಯಲ್ಲಿರುವ ನಿಧಿಯನ್ನು ಖರೀದಿಗಾಗಿ ವ್ಯಯಿಸದೇ ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿ ಎಂದು ಸಲಹೆ ನೀಡಿದ ಅವರು, ಹಿಂದಿನ ಸರಕಾರದ ಕಾರ್ಮಿಕ ಸಚಿವರು ಮಂಡಳಿ ಹಣವನ್ನು ವಿವಿಧ ಖರೀದಿಗೆ ಬಳಸಿ ಅದರಲ್ಲೂ ಅಕ್ರಮ ಮಾಡಿ ದುರುಪಯೋಗ ಪಡಿಸಿಕೊಂಡಿದ್ದರು ಎಂದು ಆರೋಪಿಸಿದರು.

ಸ್ಕಾಲರ್‌ಶಿಪ್‌ನಲ್ಲಿ ಕಡಿತ, ಖಾಸಗಿ ಆಸ್ಪತ್ರೆಗೆ ನೆರವಾಗುವ ವೈದ್ಯಕೀಯ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೀತಿಯನ್ನು ಪ್ರತಿಭಟಿಸಲು ನ.29ರಂದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಎದುರು ರಾಜ್ಯಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಾಲಕೃಷ್ಣ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ನಾಯಕರಾದ ಯು.ಶಿವಾನಂದ, ಚಿಕ್ಕ ಮೊಗವೀರ, ಏಐಟಿಯುಸಿಯ ಶಶಿಕಲಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News