×
Ad

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯ ಕರಾವಳಿಯಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ

Update: 2025-10-24 20:53 IST

ಉಡುಪಿ, ಅ.24: ಪಶ್ಚಿಮದ ಅರಬ್ಬಿ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತವು ಅಂದು ಅಪರಾಹ್ನದ ವೇಳೆಗೆ ಗಂಟೆಗೆ 20ಕಿ.ಮೀ. ವೇಗದಲ್ಲಿ ಉತ್ತರ-ಈಶಾನ್ಯದಿಕ್ಕಿನತ್ತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸಂಜೆ ಬಿಡುಗಡೆಗೊಳಿಸಿದ ರಾಷ್ಟ್ರೀಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಶುಕ್ರವಾರ ಅಪರಾಹ್ನ 12ಗಂಟೆ ಸುಮಾರಿಗೆ ಈ ಕೇಂದ್ರವು ಮಂಗಳೂರಿ ನಿಂದ ಪಶ್ಚಿಮ- ವಾಯುವ್ಯ ಭಾಗದಲ್ಲಿ 480ಕಿ.ಮೀ. ದೂರದಲ್ಲಿ, ಪಣಿಜಿ ಗೋವಾದಿಂದ ಪಶ್ಚಿಮ- ಈಶಾನ್ಯ ಭಾಗದಲ್ಲಿ 360ಕಿ.ಮೀ. ದೂರ ಹಾಗೂ ಮಹಾರಾಷ್ಟ್ರ ಮುಂಬೈಯಿಂದ ದಕ್ಷಿಣ- ಈಶಾನ್ಯ ದಿಕ್ಕಿನಲ್ಲಿ 570ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದು ಅರಬ್ಬಿ ಸಮುದ್ರದಲ್ಲಿ ಉತ್ತರ- ಈಶಾನ್ಯ ದಿಕ್ಕಿನತ್ತ ಚಲಿಸಲಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಕರಾವಳಿಯಲ್ಲಿ ಮಳೆ: ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ ಯ ಹೆಚ್ಚಿನ ಪ್ರದೇಶಗಳಲ್ಲಿ ಅ.24ರಿಂದ 26ರವರೆಗೆ ಭಾರೀ ಮಳೆ ಹಾಗೂ ಅ.27ರಂದು ಧಾರಾಕಾರ ಮಳೆ ಸುರಿಯಲಿದೆ. ಇದೇ ರೀತಿ ಕೊಂಕಣ ಮತ್ತು ಗೋವಾಗಳಲ್ಲಿ ನಾಳೆ, ಗುಜರಾತ್ ರಾಜ್ಯದಲ್ಲಿ ಅ.27ರವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಇದರೊಂದಿಗೆ ಗಂಟೆಗೆ 45ರಿಂದ 55ಕಿ.ಮೀ. ವೇಗದ ಗಾಳಿಯೂ ಕರ್ನಾಟಕ ಮತ್ತು ಕೇರಳದ ತೀರಗಳಲ್ಲಿ ಅ.26ರವರೆಗೆ ಅರಬ್ಬಿ ಸಮುದ್ರದ ಕಡೆಯಿಂದ ಬೀಸಲಿದೆ. ಈ ಅವಧಿಯಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರಲಿದ್ದು, ಕರ್ನಾಟಕದ ಕರಾವಳಿ ತೀರದಲ್ಲೂ ಅ.26ರವರೆಗೆ ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸುವ ಸಾಧ್ಯತೆ ಇರುತ್ತದೆ.

ಮೀನುಗಾರರಿಗೆ ಎಚ್ಚರಿಕೆ: ಅ.26ರವರೆಗೆ ಕರ್ನಾಟಕ ಹಾಗೂ ಕೇರಳದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಕಡಲಿಗೆ ಇಳಿಯದಂತೆಯೂ ಹವಾಮಾನ ಮುನ್ಸೂಚನೆಯಲ್ಲಿ ಎಚ್ಚರಿಸಲಾಗಿದೆ.

ವಾಯುಭಾರ ಕುಸಿತದಿಂದ ಬೀಸುವ ಬಲವಾದ ಗಾಳಿಯಿಂದ ಲಕ್ಷದ್ವೀಪ, ಕೇರಳ ಹಾಗೂ ಕರ್ನಾಟಕ ಕರಾವಳಿ ತೀರದಲ್ಲಿ ಮರಗಳು ಉರುಳುವ, ತೋಟಗಾರಿಕಾ ಬೆಳೆ ಹಾಗೂ ಬೆಳೆದು ನಿಂತ ಮುಂಗಾರು ಬೆಳೆಗಳಿಗೆ ಹಾನಿ ಯಾಗುವ ಸಾಧ್ಯತೆ ಇರುತ್ತದೆ. ಗಾಳಿ ಮತ್ತು ಮಳೆಯಿಂದ ಮನೆಗಳ ಮೇಲೆ ಮರಗಳು ಉರುಳುವ, ಕಚ್ಛಾ ಮನೆಗಳಿಗೆ ಹಾನಿಯಾಗುವ ಸಂಭವವೂ ಇರುತ್ತದೆ. ಹಠಾತ್ ನೆರೆಗಳು, ಭೂಕುಸಿತ, ಗುಡ್ಡ ಕುಸಿತದ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇರುತ್ತದೆ ಎಂದು ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ.

ಇದರಿಂದ ಜನರು ಹವಾಮಾನ ಮುನ್ಸೂಚನೆಯ ಕುರಿತು ತಿಳಿದು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹದ ಸಂದರ್ಭದಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಿದ್ಧವಾಗಿರಬೇಕು. ಗಾಳಿ-ಮಳೆಯ ಹಾಗೂ ಮಿಂಚು ಬರುವ ಸಂದರ್ಭದಲ್ಲಿ ಸುರಕ್ಷಿತ ಪ್ರದೇಶದಲ್ಲಿರಬೇಕು. ಮರದ ಕೆಳಗೆ ನಿಲ್ಲದೇ, ಸುರಕ್ಷಿತವಾದ ಜಾಗದಲ್ಲಿ ಆಶ್ರಯ ಪಡೆದಿರಬೇಕು.

ಕರ್ನಾಟಕ ಕರಾವಳಿಯ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಲ್ಲಿ ಎಚ್ಚರಿಕೆಯ ಸಂಕೇತವಾಗಿ ಸಿಗ್ನಲ್ ನಂ.3ನ್ನು ಹಾರಿಸುವಂತೆ ಸೂಚಿಸಲಾಗಿದೆ.

ಮನೆಗಳಿಗೆ ಹಾನಿ: ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದ ಕೆಲವು ಮನೆಗಳಿಗೆ ಹಾನಿಯಾದ ವರದಿ ಬಂದಿದೆ. ಹೆಬ್ರಿ ತಾಲೂಕು ಶಿವಪುರ ಗ್ರಾಮದ ನವೀನ್ ಸೇರಿಗಾರ್ ಹಾಗೂ ಪ್ರವೀಣ್ ಸೇರಿಗಾರ್ ಎಂಬವರ ಮನೆಗಳಿಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು ಒಂದು ಲಕ್ಷ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.

ಸಿಡಿಲು ಬಡಿದು ಗಾಯ: ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಮಂಜುಳ ಎಂಬವರ ಮನೆಗೆ ಮೊನ್ನೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಇದೇ ವೇಳೆ ಮಂಜುಳ ಅವರ ತಂದೆ ಅಯ್ಯಪ್ಪ ಅವರಿಗೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಕುಂದಾಪುರ ತಹಶೀಲ್ದಾರರ ಕಚೇರಿಯಂದ ಮಾಹಿತಿ ಬಂದಿದೆ.

ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಭಾಸ್ಕರ ಶೆಟ್ಟಿ ಎಂಬವರ ತೋಟಗಾರಿಕಾ ಬೆಳೆಗೆ ಮಳೆಯಿಂದ ಭಾರೀ ಹಾನಿ ಸಂಭವಿಸಿದೆ. ಇದರಿಂದ 50,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ ಎಂದು ಇಲ್ಲಿಗೆ ಬಂದಿರುವ ಮಾಹಿತಿ ತಿಳಿಸಿದೆ.

ಜಿಲ್ಲೆಯಲ್ಲಿ ಗುರುವಾರ ಸರಾಸರಿ 37.2ಮಿ.ಮೀ. ಮಳೆಯಾದರೆ, ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 7.2ಮಿಮೀ. ಮಳೆಯಾದ ವರದಿ ಬಂದಿದೆ. ಕಾರ್ಕಳದಲ್ಲಿ ಅತ್ಯಧಿಕ 10.7ಮಿ.ಮೀ. ಹಾಗೂ ಹೆಬ್ರಿ ಮತ್ತು ಕಾಪುಗಳಲ್ಲಿ ಅತಿ ಕಡಿಮೆ 3.9ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News