×
Ad

ಅನ್ಯ ಉದ್ದೇಶಕ್ಕೆ ಬಳಸಿದ 7.80 ಲಕ್ಷ ರೂ. ಅನುದಾನ ಮರಳಿಸಲು ಸಚಿವ ಡಾ. ಸುಧಾಕರ್ ಕಟ್ಟುನಿಟ್ಟಿನ ಸೂಚನೆ

ಬೆಳಪು: ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದ ಕಾಮಗಾರಿ ಪರಿಶೀಲನೆ

Update: 2025-10-18 21:20 IST

ಪಡುಬಿದ್ರೆ: ಕಾಪು ತಾಲೂಕಿನ ಬೆಳಪುವಿನಲ್ಲಿ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆಂದು ಬಿಡುಗಡೆಯಾದ ಅನುದಾನದಲ್ಲಿ 7.80 ಲಕ್ಷ ರೂ. ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿರುವುದು ಅಕ್ಷಮ್ಯ ಅಪರಾಧ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಣವನ್ನು ಬೆಳಪುವಿನ ಕೇಂದ್ರದ ಕಾಮಗಾರಿಗೆ ಮರಳಿಸಬೇಕು. ಸರಕಾರ ಇದರ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯವೇ ಇದರ ಜವಾಬ್ದಾರಿಯನ್ನು ಹೊರಬೇಕು ಎಂದು ಮಂಗಳೂರು ವಿವಿ ಕುಲಪತಿಗಳಿಗೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಬೆಳಪು ಗ್ರಾಮದಲ್ಲೇ ಅನುಷ್ಠಾನಗೊಳ್ಳುತ್ತಿರುವ ವಿಜ್ಞಾನ ಸಂಶೋಧನಾ ಕೇಂದ್ರ ಕಟ್ಟಡ ಕಾಮಗಾರಿ ಗಳನ್ನು ಶನಿವಾರ ವೀಕ್ಷಿಸಿದ ಬಳಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಬೆಳಪುವಿನಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಯದ ಕಟ್ಟಡದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಿ ಅದರೊಂದಿಗೆ ಗಾಂಧಿ ಸಂಶೋಧನಾ ಕೇಂದ್ರ ಜೋಡಣೆ ಮಾಡಿಕೊಂಡು ಅಡ್ವಾನ್ಸ್‌ಡ್ ರಿಸರ್ಚ್ ಸೆಂಟರ್ ಸಮಾನಾಂತರವಾಗಿ ಮಾಡಲು ಎಲ್ಲ ಸೌಲಭ್ಯಗಳು ಇವೆ. ಈ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದವರು ಹೇಳಿದರು.

ಪ್ರಾರಂಭದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ತೆರೆಯಬೇಕು. ಅತಿಥಿ ಉಪನ್ಯಾಸಕರು, ತರಬೇತುದಾರ ರನ್ನು ವಿವಿ ಸ್ವಂತ ಸಂಪನ್ಮೂಲದಲ್ಲಿ ನೇಮಿಸಿದರೂ ಹಣಕಾಸು ಇಲಾಖೆ ಅನುಮೋದನೆ ಪಡೆಯಬೇಕಾಗುತ್ತದೆ. ವಿವಿ ಬೇರೆ ಕಾಮಗಾರಿಗೆ ಬಳಸಿದ ಮೊತ್ತ ಹೊರತುಪಡಿಸಿ ಅಗತ್ಯವಿರುವ 17 ಕೋಟಿ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುವುದು. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಕೇಂದ್ರದ ಹಿಂದಿನ ರೂಸಾ ಯೋಜನೆಗೆ ಬದಲಾಗಿ ಅದೇ ಮಾದರಿಯಲ್ಲಿ ಪಿಎಂ ಉಷಾ ಯೋಜನೆಯಡಿ ಸಂಶೋಧನಾ ಕೇಂದ್ರಗಳಿಗೆ ಅವಕಾಶಗಳಿವೆ. ಕೇಂದ್ರ -ರಾಜ್ಯದ 60:40 ಅನುಪಾತದಲ್ಲಿ ಯೋಜನೆ ಕಾರ್ಯಗತ ಮಾಡಲು ಅವಕಾಶಗಳಿದ್ದು, ಅದರ ಪ್ರಯತ್ನವೂ ನಡೆಯಲಿ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.

ಹಿಂದಿನ ಕುಲಪತಿಗಳು ಮಾಡಿರುವ ಸಂಪನ್ಮೂಲದ ದುರ್ಬಳಕೆ ಪ್ರಮಾದದಿಂದ ಮಂಗಳೂರು ವಿಶ್ವವಿದ್ಯಾನಿಲಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಸಲಕರಣೆಗಳನ್ನು ಜೋಡಿಸಿ ಇಲ್ಲಿ ದೊಡ್ಡ ಮಟ್ಟದ ಸಂಶೋಧನಾ ಕೇಂದ್ರವಾಗಿ ರೂಪುಗೊಳಿಸಲು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾನಿಲಯಗಳನ್ನು ಪ್ರತ್ಯೇಕಿಸುವ ವೇಳೆ ಕೇವಲ ಆಸ್ತಿಯನ್ನು ಬೇರ್ಪಡಿಸಿದ್ದಾರೆ ವಿನಹ, ಪಿಂಚಣಿ ಹೊರೆ ಯನ್ನು ವಿಭಜಿಸದೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಂದ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈಗಾಗಲೇ ಬಹಳಷ್ಟು ಸಮಸ್ಯೆಗಳ ಅಧ್ಯಯನ ಮಾಡಲಾಗಿದೆ. ಏನೆಲ್ಲಾ ತೀರ್ಮಾನ ಮಾಡಬೇಕು, ಪಿಂಚಣಿ ಸಮಸ್ಯೆಗೆ ಯಾವ ರೀತಿ ಪರಿಹಾರ ಕೊಡಬೇಕು, ಸಂಪನ್ಮೂಲಗಳನ್ನು ಹೆಚ್ಚು ಮಾಡುವ ಸಲುವಾಗಿ ಆರ್ಥಿಕ ಶಿಸ್ತು ಕ್ರಮಗಳನ್ನು ವಿವಿ ಆಡಳಿತದಲ್ಲಿ ತರಲು ಸಮಿತಿ ತೀರ್ಮಾನಿಸಿದೆ. ಅವಶ್ಯಕತೆಯನ್ನು ಮೀರಿ ಸಿಬ್ಬಂದಿಗಳ ನೇಮಕ ಮಾಡಿದ ಪರಿಣಾಮ ಮಂಗಳೂರು ವಿವಿಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದೆಲ್ಲ ಅಕ್ಷಮ್ಯ ಅಪರಾಧವಾಗಿದೆ ಎಂದು ಅವರು ಹೇಳಿದರು.

ಸಂಶೋಧನೆ ನಿಜವಾಗ್ಲೂ ಆಗಬೇಕಾದರೆ ದೊಡ್ಡಮಟ್ಟದಲ್ಲಿ ಬಂಡವಾಳ ಹಾಕಬೇಕಾಗುತ್ತದೆ. ದೊಡ್ಡ ಕಾರ್ಪೋರೇಟರ್ಸ್‌, ಉದ್ಯಮಿದಾರರಿಗೆ ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನು ಮಾರಾಟ ಮಾಡದಿದ್ದಲ್ಲಿ ಬರೀ ಸಂಶೋಧನಾ ಕೇಂದ್ರದ ಹೆಸರು ಬೋರ್ಡ್‌ಗಷ್ಟೇ ಸೀಮಿತವಾಗಬಹುದು. ಈ ಬಗ್ಗೆ ಪ್ರಯತ್ನಗಳು ಮುಂದುವರೆಯಲಿ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬೆಳಪು ಕೇಂದ್ರವನ್ನು ಗಾಂಧಿ ಸಾಯನ್ಸ್ ರೀಸರ್ಚ್ ಸೆಂಟರ್ ಆಗಿ ಪರಿವರ್ತಿಸಬೇಕು. ಉಳಿದ ಕಾಮಗಾರಿಗಳಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು. ಗಾಂಧಿ ಅಧ್ಯಯನ ಕೇಂದ್ರವನ್ನಾಗಿಸಲು ವಿನಯಕುಮಾರ್ ಸೊರಕೆ ನೀಡಿದ ಸಲಹೆ ಯನ್ನು ಪರಿಗಣಿಸಿ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ತೀರ್ಮಾನಿಸಲಾ ಗುವುದು ಎಂದು ಸುಧಾಕರ್ ಹೇಳಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅಭಿಪ್ರಾಯ ಮಂಡಿಸಿದರು.

ರಾಜ್ಯ ಗೃಹ ಮಂಡಳಿಯ ಎಇಇ ಸಹನಾ, ಬೆಳಪು ಸ್ನಾತಕೋತ್ತರ ಕೇಂದ್ರದ 8 ಬ್ಲಾಕ್‌ಗಳಲ್ಲಿ ನಿರ್ವಹಿಸಲಾದ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಶೇ.82ರಷ್ಟು ಕಾಮಗಾರಿಗಳು ಮುಕ್ತಾಯಗೊಂಡಿದೆ. ಅನುದಾನ ಬಿಡುಗಡೆಯಾದರೆ ಉಳಿದ ಕಾಮಗಾರಿಗಳನ್ನು ತಕ್ಷಣ ನಡೆಸಲಾಗುವುದು ಎಂದರು.

ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಮೊಗವೀರ ಯೋಜನೆಯ ವಿವರ ನೀಡಿದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಕಾಪು ಪ್ರಭಾರ ತಹಸೀಲ್ದಾರ್ ಪ್ರದೀಪ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಪ್ರಶಾಂತ್ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು.

ಬೆಳಪು ಪಾಲಿಟೆಕ್ನಿಕ್: ಹೊಸ ಕೋರ್ಸ್ ಪ್ರಾರಂಭಕ್ಕೆ ಸಚಿವರ ಸೂಚನೆ

ಪಡುಬಿದ್ರೆ: ಎಂಟತ್ತು ಕೋಟಿ ರೂ. ಬಂಡವಾಳ ಹಾಕಿ ಮಾಡಿರುವ ಪಾಲಿಟೆಕ್ನಿಕ್‌ಗಳಲ್ಲಿ ಒಂದೆರಡು ಕೋರ್ಸ್‌ ಗಳಿದ್ದರೆ ಯಾವುದೇ ಉಪಯೋಗವಿಲ್ಲ. ಎಐಸಿಟಿ ಅನುಮತಿ ಪಡೆದು ಹೊಸ ಕೋರ್ಸ್‌ಗಳ ಅಳವಡಿಕೆಗೆ ಚಿಂತನೆ ನಡೆಸುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಬೆಳಪು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಪುವಿನಲ್ಲಿರುವ ಪಾಲಿಟೆಕ್ನಿಕ್ ಮುಖ್ಯಸ್ಥರು ನೀಡಿದ ಮನವಿಗೆ ಉತ್ತರಿಸಿ ಸಚಿವರು ಮಾತನಾಡುತಿದ್ದರು.

ರಾಜ್ಯದ 13 ಪಾಲಿಟೆಕ್ನಿಕ್‌ಗಳಲ್ಲಿ 3 ಕೋರ್ಸ್‌ಗಳಿವೆ, 3ರಲ್ಲಿ ಒಂದೊಂದು ಕೋರ್ಸ್ ಇದೆ. ಇನ್ನು 8ರಲ್ಲಿ ಎರಡು ಕೋರ್ಸ್‌ಗಳಿವೆ. ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಉದ್ಯೋಗಾಧಾರಿತ ಕೋರ್ಸ್‌ಗಳ ಆರಂಭಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬೆಳಪು ಪಾಲಿಟೆಕ್ನಿಕ್‌ನಲ್ಲೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ 2 ಕೋರ್ಸ್‌ಗಳ ಆರಂಭ ಮಾಡಲು ಕ್ರಮ ವಹಿಸಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ 17 ಪಾಲಿಟೆಕ್ನಿಕ್ ಕಾಲೇಜುಗಳು ಕಳೆದ 5 ವರ್ಷಗಳಲ್ಲಿ ಪ್ರಗತಿ ಕಂಡಿಲ್ಲ. ಹೊಸ ಪಾಲಿಟೆಕ್ನಿಕ್ ಮಂಜೂರು ಆಗಿಲ್ಲ. ಈಗಿರುವ 17ನ್ನು ಸುಸಜ್ಜಿತಗೊಳಿ ಸುವುದೇ ಸರಕಾರ ಕ್ಕೊಂದು ಸವಾಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ವಸತಿ ನಿಲಯಗಳ ಆರಂಭಕ್ಕೆ ಹಿನ್ನಡೆ ಯಾಗಿದೆ. ಎಲ್ಲಾ ಕಡೆ ಹಿಂದುಳಿದ ವರ್ಗಗಳ ಇಲಾಖೆಗೆ ಅದನ್ನು ಹಸ್ತಾಂತರ ಮಾಡಲಾಗುತ್ತಿದ್ದು, ಇಲ್ಲಿಯೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಸ್ಥಾಪನೆಗೆ ಪ್ರಯತ್ನ ಮಾಡುವಂತೆ ತಿಳಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಈ ಭಾಗದಲ್ಲಿ ಇರುವ ಪಾಲಿಟೆಕ್ನಿಕ್‌ಗೆ ಹೆಚ್ಚುವರಿ ಕೋರ್ಸು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಲು ಬೇಡಿಕೆ ಸಲ್ಲಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News