ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದ ಮೆರವಣಿಗೆ
ಉಡುಪಿ : ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಜರಗಿತು.
ಪರಮಪ್ರಸಾದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಭಕ್ತಾಧಿಗಳಿಗೆ ಸಂದೇಶ ನೀಡಿದರು.
ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರ ಬೇಕು. ಪ್ರೀತಿ ಮತ್ತು ಸೇವೆ ಕ್ರೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ನಮ್ಮ ಜೀವನದಲ್ಲಿ ಕ್ಷಮೆ ಪ್ರಿತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡು ವಂತಾಗ ಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು.
ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಂ.ಸಿರಿಲ್ ಲೋಬೊ ಪರಮ ಪ್ರಸಾದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.
ಈ ವೇಳೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಸಹಾಯಕ ಧರ್ಮಗುರು ವಂ.ಲಿಯೊ ಪ್ರವೀಣ್ ಡಿಸೋಜ ಪವಿತ್ರ ಬೈಬಲ್ ವಾಚನ ಮಾಡಿದರು. ಉಡುಪಿ ಧರ್ಮಪ್ರಾಂತ್ಯವ್ಯಾಪ್ತಿಯ 51 ಚರ್ಚ್‌ಗಳಿಂದ ಸುಮಾರು 3000ಕ್ಕೂ ಅಧಿಕ ಮಂದಿ ಭಕ್ತಾದಿಗಳು, 50ಕ್ಕೂ ಅಧಿಧಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.
ಇದೇ ವೇಳೆ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕ್ರಿಸ್ತ ಜಯಂತಿ ಆಚರಣೆ -2025ನೇ ವರ್ಷದ ಸಿದ್ದತೆಗೆ ವಿದ್ಯುಕ್ತವಾಗಿ ಲೋಗೊ ಅನಾವರಣಗೊಳಿಸುವ ಮೂಲಕ ಧರ್ಮಾಧ್ಯಕ್ಷರು ಚಾಲನೆ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಕಲ್ಯಾಣಪುರ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ. ವಲೇರಿಯನ್ ಮೆಂಡೊನ್ಸಾ, ವಂ.ಡಾ.ಲೆಸ್ಲಿ ಡಿಸೋಜ, ವಂ.ಪಾವ್ಲ್ ರೇಗೊ, ವಂ. ಚಾರ್ಲ್ಸ್ ಮಿನೇಜಸ್, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ರೋಕ್ ಡೇಸಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.