×
Ad

ಕುಂದಾಪುರ: ಕೋಟೇಶ್ವರದ ಕೋಡಿಹಬ್ಬ ಸಂಪನ್ನ

Update: 2023-11-27 22:07 IST

ಕುಂದಾಪುರ: ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವೈಭವದ ಬ್ರಹ್ಮ ರಥೋತ್ಸವ (ಕೊಡಿ ಹಬ್ಬ) ಕ್ಕೆ ಊರ ಹಾಗೂ ಪರವೂರಿನಿಂದ ಬಂದ ಸಾವಿರಾರು ಮಂದಿ ಸಾಕ್ಷಿಯಾದರು.

ವೃಶ್ಚಿಕ ಮಾಸದಂದು ನಡೆಯುವ ಶ್ರೀ ಮಹಾತೋಭಾರ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವಕ್ಕೆ ಸೋಮವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಗಳು ಪ್ರಾರಂಭವಾಗಿತ್ತು. ತಂತ್ರಿ ಪ್ರಸನ್ನಕುಮಾರ ಐತಾಳ್ ಅವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು.

ಮುಂಜಾನೆಯೇ ಇತಿಹಾಸ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದ್ದರು. ಬೆಳಿಗ್ಗೆ ದೇವಸ್ಥಾನದಿಂದ ಋತ್ವೀಜರು, ಪಂಚ ವಾದ್ಯಗಳು, ಪಾರಂಪರಿಕ ಸೂರ್ಯ ವಾದ್ಯ, ತಟ್ಟಿರಾಯ, ಚಂಡೆ ಹಾಗೂ ವಾದ್ಯ ಮೇಳಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿದ ಬಳಿಕ ಮಂಗಳಾ ರತಿ, ಹಣಕಾಯಿ ಹಾಗೂ ರಥದ ಚಕ್ರಗಳಿಗೆ ಕಾಯಿ ಒಡೆಯುವ ಪಾರಂಪರಿಕ ಪದ್ಧತಿ ಮುಗಿಸಿದ ಬಳಿಕ ರಥ ಬೀದಿಯಲ್ಲಿ ರಥವನ್ನು ಜಯ ಘೋಷದೊಂದಿಗೆ ಎಳೆಯುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು.

ಕೋಟಿಲಿಂಗೇಶ್ವರನೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಕೋಟಿಲಿಂಗೇಶ್ವರ ಭತ್ತದ ಕುಡಿಗಳನ್ನು ಸ್ವಾಗತಿಸಲಾಯಿತು. ನಂದಳಿಕೆಯ ಪಿ.ರವಿರಾಜ್ ಭಟ್ ಅವರು ಚಂಡೆ ವಾದನಕ್ಕೆ ದೇವರನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡು ತಾಂಡವ ನೃತ್ಯ ಸೇವೆ ಸಲ್ಲಿಸಿದರು. ಈ ವೇಳೆ ನೆರೆದ ಭಕ್ತರು ಜಯಘೋಷ ಮಾಡಿದರು. ಕೊಡಿ ಹಬ್ಬಕ್ಕೆ ಬಂದ ನವ ವಿವಾಹಿತರು ಬದುಕಿನ ಕುಡಿಯೊಡಿಯುತ್ತದೆ ಎನ್ನುವ ನಂಬಿಕೆಯಿಂದ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು 'ಕಬ್ಬಿನ ಕೊಡಿ' ಯನ್ನು ಮನೆಗೆ ಕೊಂಡೊಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು. ಸಂಜೆ ಮರಳಿ ದೇವಸ್ಥಾನದ ಮುಂಭಾಗದವರೆಗೂ ಬ್ರಹ್ಮರಥವನ್ನು ಎಳೆಯುವ ಮೂಲಕ ರಥಾವರೋಹಣ ನಡೆಸಲಾಯಿತು.

ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ವಿವಿಧ ಮಾರಾಟ ಮಳಿಗೆಗಳು, ಅಂಗಡಿ-ಮುಂಗಟ್ಟುಗಳು, ಮನೋರಂಜನಾ ಪಾರ್ಕ್‌, ವಿದ್ಯುತ್ ಅಲಂಕಾರಗಳು, ಸ್ತಬ್ದ ಚಿತ್ರ, ದೃಶ್ಯ ಸಂಯೋಜನೆಗಳು ಜಾತ್ರೆಯಲ್ಲಿತ್ತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ್‌ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಉದ್ಯಮಿಗಳಾದ ಗೋಪಾಡಿ ಶ್ರೀನಿವಾಸ ರಾವ್, ಮಾರ್ಕೋಡು ಸುಧೀರ್‌ಕುಮಾರ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಆಸ್ತಿಕ ಸಮಾಜದ ಅಧ್ಯಕ್ಷ ಕೆ.ರವೀಂದ್ರ ಐತಾಳ್, ಕಾರ್ಯದರ್ಶಿ ಕೆ.ವಿನೋದ್ ಮರ್ತಪ್ಪ ಶೇಟ್, ಜತೆ ಕಾರ್ಯದರ್ಶಿ ದಿನೇಶ್ ಸುವರ್ಣ ಚಾತ್ರಬೆಟ್ಟು ಇದ್ದರು.

ಕೋಟೇಶ್ವರದ ರಥ ಬೀದಿ, ಊರಿನ ಪ್ರಮುಖ ಬೀದಿಗಳು, ಕೋಟೇಶ್ವರದಿಂದ ಕುಂಭಾಸಿಯವರೆಗೆ ಹಾಗೂ ಕೋಟೇಶ್ವರ ದಿಂದ ಹಂಗಳೂರು ವಿನಾಯಕವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಕೋಟೇಶ್ವರದಲ್ಲಿ ವಿವಿಧ ಸಂಘಟನೆಗಳಿಂದ ಜಾತ್ರಾ ಉತ್ಸವವಕ್ಕಾಗಿ ಆಕರ್ಷಕ ದೃಶ್ಯ ಸಂಯೋಜನೆ, ಹಣತೆ ದೀಪಾಲಂಕಾರ ಹಾಗೂ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ದೇವಸ್ಥಾನ ಹಾಗೂ ಬ್ರಹ್ಮ ರಥಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ವಿವಿಧ ಸಂಘ-ಸಂಸ್ಥೆಗಳಿಂದ ಉಚಿತ ಪಾನಕ ಹಾಗೂ ಮಜ್ಜಿಗೆ ವಿತರಣೆ ನಡೆಯಿತು.

ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ನಂದಕುಮಾರ, ಎಸ್‌.ಐ ಗಳಾದ ನಾಸೀರ್ ಹುಸೇನ್, ಪ್ರಸಾದ್ ಕೆ, ಸಂಗೀತಾ, ಪವನ್ ನಾಯಕ್, ನೂತನ್, ಸುಧಾ ರಾಣಿ, ಸುಬ್ಬಣ್ಣ, ಸುದರ್ಶನ್ ಅವರ ನೇತ್ರತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News