×
Ad

ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದರೆ ಮಾತ್ರ ಕನ್ನಡದ ಉಳಿವು: ರಾಘವೇಂದ್ರ ರಾವ್

Update: 2023-12-06 21:53 IST

ಕೋಟ, ಡಿ.6: ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದರೆ ಮಾತ್ರ ಕನ್ನಡ ಉಳಿಯುತ್ತದೆ. ನಾಡು ನುಡಿಯನ್ನು ಕಟ್ಟಿ ಕೊಡುವ ಕೆಲಸವಾಗಬೇಕು. ನಾಡಿನ ಪ್ರೀತಿ, ಭಾಷೆಗೂ ಮೀರಿದ ಭಾವನೆ ಕನ್ನಡವನ್ನು ಉಳಿಸುತ್ತದೆ ಎಂದು ಸಾಹಿತ್ಯಿಕ ಚಿಂತಕ ಕಾಪು ರಾಘವೇಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ಮುಕ್ತಾಯಗೊಂಡ ಎರಡು ದಿನಗಳ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಕನ್ನಡ ಭಾಷೆ ಹಾಗೂ ಲಿಪಿಯ ಬಗ್ಗೆ ಅನುಸಂಧಾನವಾಗಬೇಕು. ಅಕ್ಷರದ ಬಗ್ಗೆ ಪ್ರೀತಿ ಬೆಳೆಸಬೇಕು. ಕನ್ನಡತನ ಕಾಣ ಬೇಕು. ನಮ್ಮ ಕಲಾಪ್ರಕಾರಗಳು, ವಿವಿಧ ಪ್ರದೇಶಗಳಲ್ಲಿ ಮಾತನಾಡುವ ಭಾಷೆ, ಹಳಗನ್ನಡ, ಹೊಸಗನ್ನಡ, ದಾಸರ ಕೀರ್ತನೆ ಕಾವ್ಯ ಪರಂಪರೆ ಕನ್ನಡದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದರೆ ಮಾತ್ರ ಕನ್ನಡ ಉಳಿಯುತ್ತದೆ ಎಂದು ಅವರು ಹೇಳಿದರು.

ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿ ಸಮ್ಮೇಳನದ ಬಗ್ಗೆ ಪ್ರತಿಸ್ಪಂದನೆ ನೀಡಿ ಕ.ಸಾ.ಪದ ಚಟುವಟಿಕೆಗಳು, ತೆರೆದ ಮನಸ್ಸುಗಳು ಕನ್ನಡ ಉಳಿವಿಗೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಬಂದಿರುವುದು ವಿಷಾಧನೀಯ. ಮುಂಬಯಿ ಯಲ್ಲಿರುವ ಕನ್ನಡ ಶಾಲೆಗಳು ಕೂಡಾ ಮುಚ್ಚಿದ್ದರೂ, ಪರ್ಯಾಯವಾಗಿ ಕನ್ನಡ ಸಂಘಗಳ ಮೂಲಕ ಕನ್ನಡ ಪ್ರಗತಿಯಾಗುತ್ತಿರುವುದು ಸಂತಸದ ವಿಷಯ ಎಂದರು.

ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ ಕುಂದರ್ ಸಾಧಕರನ್ನು ಸನ್ಮಾನಿಸಿದರು. ಸಮ್ಮೇಳನದ ಸಂದರ್ಭದಲ್ಲಿ 30ಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಯಿತು.

ಕ.ಸಾ.ಪ ಉಡುಪಿ ಜಿಲ್ಲಾ ಸ್ಥಾಪಕಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಕೋಟ ವಿದ್ಯಾಸಂಘದ ಅಧ್ಯಕ್ಷ ಪಿ.ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ. ರಾಮದೇವ ಐತಾಳ, ಕ.ಸಾ.ಪದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಮನೋಹರ ಪಿ, ತಾಲೂಕು ಕಸಾಪ ಅಧ್ಯಕ್ಷರಾದ ಬ್ರಹ್ಮಾವರದ ರಾಮಚಂದ್ರ ಐತಾಳ, ಉಡುಪಿಯ ರವಿರಾಜ ಎಚ್.ಪಿ, ಕುಂದಾಪುರ ಡಾ.ಉಮೇಶ ಪುತ್ರನ್, ಕಾರ್ಕಳದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಾಪುವಿನ ಪುಂಡಲೀಕ ಮರಾಠೆ, ಹೆಬ್ರಿಯ ಶ್ರೀನಿವಾಸ ಭಂಡಾರಿ ಮತ್ತು ಬೈಂದೂರಿನ ಡಾ.ರಘು ನಾಯಕ್, ಸಂಘಟನಾ ಕಾರ್ಯದರ್ಶಿ ಪಿ.ವಿ.ಆನಂದ ಸಾಲಿಗ್ರಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ, ಕೋಟ ಪಿಯು ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಮತ್ತಿತರರು ವೇದಿಕೆಯಲ್ಲಿದ್ದರು.

ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ನಿರ್ಣಯಗಳು

ಉಡುಪಿ ಜಿಲ್ಲೆಯ ಕೋಟದಲ್ಲಿ ಬುಧವಾರ ಮುಕ್ತಾಯಗೊಂಡ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾಧ್ಯಮ ಅನುದಾನ, ಅನುದಾನ ರಹಿತ ಮತ್ತು ಸರಕಾರಿ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಸರಕಾರ ಕ್ರಮ ಕೈಗೊಂಡು, ಕೂಡಲೇ ಎಲ್ಲ ಸಿಬ್ಬಂದಿಗಳನ್ನು ನೇಮಕ ಮಾಡಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸರಕಾರಕ್ಕೆ ಕಳುಹಿಸಲಾಯಿತು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News