×
Ad

ಮಾಹೆಯ ‘ಯಕ್ಷಗಾನ’ ಸಾಕ್ಷ್ಯಚಿತ್ರಕ್ಕೆ ಚಿತ್ರೋತ್ಸವದಲ್ಲಿ ಪ್ರಶಸ್ತಿ

Update: 2023-12-07 21:07 IST

ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂತರ್ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ (ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್-ಸಿಐಎಸ್‌ಡಿ) ಕರಾವಳಿಯ ಯಕ್ಷಗಾನ ಕಲೆ ಕುರಿತು ನಿರ್ಮಿಸಿದ ‘ಯಕ್ಷಗಾನ’ ಸಾಕ್ಷ್ಯಚಿತ್ರ ವಾರಾಣಸಿಯಲ್ಲಿ ಈ ವಾರ ನಡೆದ ಸಾಂಸ್ಕೃತಿಕ ಪ್ರವಾಸೋದ್ಯಮ ಕುರಿತ ಪ್ರತಿಷ್ಠಿತ ಆರನೆಯ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ತೀರ್ಪುಗಾರರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಈ ಚಿತ್ರೋತ್ಸವದಲ್ಲಿ 44 ದೇಶಗಳ 94 ಕಿರುಚಿತ್ರಗಳು ಭಾಗವಹಿಸಿದ್ದು ಕರಾವಳಿಯ ಶ್ರೀಮಂತ ಕಲಾಪರಂಪರೆಯನ್ನು ಪ್ರತಿನಿಧಿಸುವ ಯಕ್ಷಗಾನ’ ಕಿರುಚಿತ್ರವು ಎಲ್ಲ ಕಿರುಚಿತ್ರಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದೆ. ಮಾಹೆಯ ಈ ಕೇಂದ್ರ ಕರಾವಳಿಯ ಸಂಸ್ಕೃತಿ ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣದ ವಿಭಾಗಗಳಲ್ಲಿ ಮಹತ್ವದ ಕೆಲಸಗಳನ್ನು ಮಾಡುತ್ತಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

‘ಯಕ್ಷಗಾನ’ ಕಿರುಚಿತ್ರವನ್ನು ಸಿಐಎಸ್‌ಡಿಯ ತುಳುನಾಡಿನ ಸಜೀವ ಸಂಸ್ಕೃತಿಗಳ ಮೂಲಕ ಭಾರತದ ಸೂಕ್ಷ್ಮ ಅರಿವು ಯೋಜನೆಯಡಿಯಲ್ಲಿ ಸಿದ್ಧಗೊಳಿಸಲಾಗಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡಿನ ಸಂಸ್ಕೃತಿ-ಪರಂಪರೆಗಳ ಕುರಿತು ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣವನ್ನು ನಡೆಸಲಾಗುತ್ತಿದೆ.

ಭಾರತೀಯ ಪುರಾಣಗಳನ್ನು ಸಂಭಾಷಣೆ -ಅಭಿನಯ-ಸಂಗೀತ- ನೃತ್ಯ -ವೇಷಭೂಷಣದ ಮೂಲಕ ಪ್ರಸ್ತುತಪಡಿಸುವ ಅತ್ಯಂತ ಜನಪ್ರಿಯ ಕಲೆ ಯಕ್ಷಗಾನದ ಕುರಿತು ಈ ಕಿರುಚಿತ್ರವನ್ನು ಸಿದ್ಧಪಡಿಸಲಾಗಿದೆ. ಈ ಕಿರುಚಿತ್ರದ ಯಶಸ್ಸು ಭಾರತದ ಪ್ರಾದೇಶಿಕ ಕಲೆಗಳು ಹೊಂದಿರುವ ಜಾಗತಿಕ ಮಟ್ಟದ ಪ್ರಾಮುಖ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಇದರ ಜೊತೆಗೆ ‘ಯಕ್ಷಗಾನ’ ಕಿರುಚಿತ್ರವು ತ್ರಿಶೂರ್ ಅಂತಾರಾಷ್ಟ್ರೀಯ ಚಿತ್ರೋತ್ಸವ (ಐಎಫ್‌ಎಫ್‌ಟಿ) ಆಯೋಜಿಸುವ 7ನೆಯ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ (ಐಎಫ್‌ಎಫ್‌ಎಫ್)ಗೂ ಆಯ್ಕೆಯಾಗಿದೆ. 2023ರ ಎಪ್ರಿಲ್ ತಿಂಗಳು ಹೈದರಾಬಾದ್‌ನಲ್ಲಿ ನಡೆದ ಸಿಇಸಿ-ಯುಜಿಸಿಯ ರಾಷ್ಟ್ರ ಮಟ್ಟದ ಶೈಕ್ಷಣಿಕ ಚಿತ್ರೋತ್ಸವ ಸ್ಪರ್ಧೆಯಲ್ಲೂ ಸಿಐಎಸ್‌ಡಿಯ ‘ಯಕ್ಷಗಾನ’ದ ಪಠ್ಯಕ್ಕೆ ಅತ್ಯುತ್ತಮ ಚಿತ್ರಕತೆ ಬಹುಮಾನ ಲಭಿಸಿತ್ತು.

ಮಾಹೆಯ ಅಂತರ್ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ ಸಿದ್ಧಪಡಿಸಿದ ‘ಯಕ್ಷಗಾನ’ ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಪ್ರಶಸ್ತಿ ಲಭಿಸಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಮಾಹೆಯ ಉಪಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್, ಮಾಹೆ ಸಂಸ್ಥೆ ಸ್ಥಳೀಯ ಸಂಸ್ಕೃತಿಯ ಅಧ್ಯಯನಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಪ್ರಾದೇಶಿಕತೆಯ ಗವಾಕ್ಷಿಯ ಮೂಲಕ ಸಮಗ್ರ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುವಲ್ಲಿ ಅರ್ಥಪೂರ್ಣ ಹೆಜ್ಜೆಗಳನ್ನಿರಿಸುತ್ತಿದೆ. ಯಕ್ಷಗಾನ’ ಕಿರುಚಿತ್ರವು ಪ್ರಾದೇಶಿಕ ಕಲೆಯೊಂದರ ವೈಶಿಷ್ಟ್ಯವನ್ನು ಸಾರಿ ಹೇಳುವು ದಷ್ಟೇ ಅಲ್ಲ, ಪ್ರಾದೇಶಿಕ ಕಲೆಗಳು ಜಾಗತಿಕ ಮಟ್ಟದಲ್ಲಿಯೂ ಮಹತ್ವವನ್ನು ಹೊಂದಿರುವುದನ್ನು ಎತ್ತಿಹಿಡಿಯುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಹೆಯ ಆಡಳಿತ ಶಾಸ್ತ್ರ, ಕಾನೂನು, ಮಾನವಿಕ ಮತ್ತು ಸಮಾಜವಿಜ್ಞಾನ ವಿಭಾಗದ ಸಹಉಪಕುಲಪತಿ ಪ್ರೊ.ಡಾ. ಮಧು ವೀರರಾಘವನ್ ಅವರು, ಈ ಪ್ರಶಸ್ತಿಯು ಸಿಐಎಸ್‌ಡಿ ತಂಡದ ಪರಿಶ್ರಮಕ್ಕೆ ದೊರೆತ ಮನ್ನಣೆಯಾಗಿದೆ. ಜೊತೆಗೆ, ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ದೊರೆತ ಗೌರವವೂ ಹೌದು. ಭಾರತದ ಪರಂಪರೆಯ ಬಹುತ್ವವನ್ನು ಪ್ರತಿನಿಧಿಸುವ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ, ಸಂಶೋಧನೆ ಮತ್ತು ದಾಖಲೀಕರಣಗಳಂಥ ಕೆಲಸಗಳನ್ನು ಮುಂದುವ ರಿಸಲು ಈ ಪ್ರಶಸ್ತಿಯಿಂದ ಉತ್ತೇಜನ ದೊರೆತಂತಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News