ಉಡುಪಿ: ನಗರಸಭೆ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ
Update: 2023-12-08 20:30 IST
ಉಡುಪಿ, ಡಿ.8: ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ- 2023ಕ್ಕೆ ಸಂಬಂಧಿಸಿದಂತೆ, ಉಡುಪಿ ನಗರಸಭೆಯ 13ನೇ ಮೂಡುಪೆರಂಪಳ್ಳಿ ವಾರ್ಡಿನ ಸಾಮಾನ್ಯ ಮಹಿಳೆ ಮೀಸಲಾತಿ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ್ದು, ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಡಿ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಯನ್ನು ಹಿಂದೆಗೆದುಕೊಳ್ಳಲು ಡಿ. 18 ಕೊನೆಯ ದಿನವಾಗಿದೆ. ಡಿ. 27ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ನಡೆಸಲಾಗುವುದು.
ಡಿ.30ರಂದು ತಾಲೂಕು ಕೇಂದ್ರ ಸ್ಥಳದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಕಾರ್ಯವು ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.