ಬೈಂದೂರು ಸೋಮೇಶ್ವರದಲ್ಲಿ ಬೀಚ್ ಅಭಿವೃದ್ಧಿ, ಮರಿನಾ ಯೋಜನೆ ಕಾಮಗಾರಿಯಲ್ಲ; ಸ್ಪಷ್ಟೀಕರಣ
ಉಡುಪಿ, ಡಿ.8: ಬೈಂದೂರು ತಾಲೂಕು ಪಡುವರಿ ಸೋಮೇಶ್ವರ ಬೀಚಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯು ಬೀಚ್ ಅಭಿವೃದ್ಧಿ ಕಾಮಗಾರಿ ಯಾಗಿದ್ದು, 2021-22ನೇ ಸಾಲಿನಲ್ಲಿ ಹತ್ತು ಕೋಟಿ ಬದಲಾಗಿ 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪಡೆದಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರಕಟಣೆ ತಿಳಿಸಿದೆ.
ಈ ಮೊತ್ತದಲ್ಲಿ ಬೀಚ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 971.31 ಲಕ್ಷ ರೂ. ಮಂಜೂರಾಗಿದ್ದು, ಈ ಮೊತ್ತದಲ್ಲಿ ಖಾಸಗಿ ಜಮೀನನ್ನು ಖರೀದಿಸಿ, ಇಲಾಖೆಯ ಹೆಸರಿಗೆ ನೋಂದಾವಣೆ ಮಾಡಲಾಗುವುದು. ಸಮುದ್ರ ಕಿನಾರೆ ಬಳಿ ತಡೆಗೋಡೆ ನಿರ್ಮಾಣ, ಚರಂಡಿ ನಿರ್ಮಾಣ, ಪಾಥ್ ವೇ ನಿರ್ಮಾಣ, ಗ್ಯಾಲರಿ, ಶೌಚಾಲಯ ನವೀಕರಣ, ಕಲ್ಯಾಣಿ ನವೀಕಣ, ವಿದ್ಯುತೀಕರಣ, ಪಾರ್ಕಿಂಗ್ ವ್ಯವಸ್ಥೆ, ಇಂಟರ್‌ಲಾಕ್ ವ್ಯವಸ್ಥೆ, ಕಲ್ಲು ಬೆಂಚಿನ ಆಸನಗಳು ಹಾಗೂ ದಾರಿದೀಪಗಳು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಪ್ರವಾಸೋದ್ಯಮ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆ.ಟಿ.ಐ.ಎಲ್) ವತಿಯಿಂದ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಪ್ರಗತಿಯಲ್ಲಿರುವ ಸೋಮೇಶ್ವರ ಬೀಚ್ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಥಳೀಯರು ಆಕ್ಷೇಪಣೆ ವ್ಯಕ್ತಪಡಿಸಿದ್ದು, ಈ ಯೋಜನೆ ಸೋಮೇಶ್ವರ ಬೀಚ್ ಅಭಿವೃದ್ಧಿ ಕಾಮಗಾರಿಯೇ ಹೊರತು ಮರಿನಾ ಯೋಜನೆಗೆ ಸಂಬಂಧಿಸಿದ ಕಾಮಗಾರಿಯಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ಬೈಂದೂರು ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.