×
Ad

ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಬದ್ಧ: ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್

Update: 2023-12-11 20:17 IST

ಉಡುಪಿ, ಡಿ.11: ಎನ್‌ಪಿಎಸ್, ಶಿಕ್ಷಕರ ಭಡ್ತಿ ಸಮಸ್ಯೆಗಳು ಸೇರಿದಂತೆ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬದ್ದನಿರುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಮತದಾರ ಶಿಕ್ಷಕ ಬಂಧುಗಳಿಗೆ ಭರವಸೆ ನೀಡಿದ್ದಾರೆ.

ಸೋಮವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರ ಎಪ್ರಿಲ್ 1ರ ನಂತರ ನೇಮಕಾತಿ ಆದವರಿಗೆ ಹೊಸ ಪಿಂಚಣಿ ಯೋಜನೆಯನ್ನು(ಎನ್ಪಿಎಸ್) ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಜಾರಿ ಮಾಡುವ ಮೂಲಕ ಶಿಕ್ಷಕರ ನಿವೃತ್ತ ಜೀವನವನ್ನು ಹಾಳು ಮಾಡುವ ಕಾರ್ಯ ಮಾಡಲಾಗಿದೆ ಎಂದರು.

ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿಗೆ ಶಿಕ್ಷಕರ ಮತವನ್ನು ಕೇಳುವ ನೈತಿಕತೆ ಇಲ್ಲ ಎಂದ ಅವರು, ಪ್ರಸ್ತುತ ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆಯ ಮೂರು ತಾಲೂಕುಗಳು ಸೇರಿದ್ದು, ಈ ಬಾರಿ ಚುನಾವಣಾ ಆಯೋಗವೇ ಮುತುವರ್ಜಿ ವಹಿಸಿ ಮತದಾರರ ನೋಂದಣಿ ಮಾಡಿರುವುದು ಶ್ಲಾಘನೀಯ ಎಂದು ನುಡಿದರು.

ನೈರುತ್ಯ ವಲಯದಲ್ಲಿ ಈಗಾಗಲೇ 18,000 ಮತದಾರರು ನೋಂದಣಿ ಯಾಗಿದ್ದಾರೆ. ಉಡುಪಿ ಜಿಲ್ಲೆ ಒಂದರಲ್ಲಿಯೇ 4,000 ಮತದಾರರಿದ್ದಾರೆ. ಒಟ್ಟು 30,000 ಮತಗಳು ನೋಂದಣಿಯಾಗುವ ನಿರೀಕ್ಷೆಯಿದೆ ಎಂದು ಕೆ.ಕೆ.ಮಂಜುನಾಥ ಹೇಳಿದರು.

ಎನ್ಪಿಎಸ್ ಸಮಸ್ಯೆ ಒಂಡೆಡೆಯಾದರೆ, ಭಡ್ತಿ ಹೊಂದಿದ ಶಿಕ್ಷಕರಿಗೆ ಭಡ್ತಿ ಹೊಂದಿರುವುದೇ ಶಿಕ್ಷೆ ಎಂಬಂತಾಗಿದೆ. ಸುಮಾರು 5ರಿಂದ 15 ಸಾವಿರ ರೂ. ವೇತನ ವ್ಯತ್ಯಾಸವಾಗ್ತಿದೆ. ಅಲ್ಲದೇ ಅನುದಾನಿತ ಶಿಕ್ಷಕರ ಸಮಸ್ಯೆಗಳೇ ಬೇರೆ ಇವೆ. ಶಿಕ್ಷಕರ ಸಮಸ್ಯೆಗಳನ್ನು ಶಿಕ್ಷಕರು ಮಾತ್ರ ಬಗೆಹರಿಸಲು ಸಾಧ್ಯ. ಅದರಲ್ಲೂ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಶಿಕ್ಷಕರು ಬೆಂಬಲಿಸುವ ಅಗತ್ಯವಿದೆ ಎಂದರು.

ಕಳೆದ ಸುಮಾರು 17 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ತನ್ನನ್ನು ಶಿಕ್ಷಕರು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಅವರು, 2024ರ ಜೂನ್ ಎರಡನೇ ವಾರದಲ್ಲಿ ಒಂದೇ ದಿನ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕುಶಲ್ ಶೆಟ್ಟಿ, ಜಿಲ್ಲಾ ವಕ್ತಾರರಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಬಿಪಿನ್‌ಚಂದ್ರ ಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News