×
Ad

ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕ್ರೀಡಾಕೂಟ ಸಮಾರೋಪ

Update: 2023-12-14 21:01 IST

ಉಡುಪಿ : ಜಿಲ್ಲಾ ಗೃಹ ರಕ್ಷಕದಳ ವತಿಯಿಂದ ನಡೆದ ಜಿಲ್ಲಾ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭ ಇಂದು ನಗರದ ಜಿಲ್ಲಾ ಗೃಹರಕ್ಷಕ ದಳ ಕಛೇರಿಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸತತ ಹತ್ತು ವರ್ಷಗಳಿಂದ ಗೃಹರಕ್ಷಕ ದಳವು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಸಂದರ್ಭದಲ್ಲಿ ಪೋಲಿಸ್ ಇಲಾಖೆಯೊಂದಿಗೆ ಗೃಹರಕ್ಷಕದಳವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೊಂಡು ಬಂದಿದ್ದು, ಪೋಲಿಸ್ ಸಿಬ್ಬಂದಿಗಳ ನೇಮಕಾತಿ ಸಂದರ್ಭದಲ್ಲಿ ಗೃಹರಕ್ಷಕರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದರು.

ಗೃಹರಕ್ಷಕದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡೆಂಟ್ ಕೆ.ಸಿ.ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾಯಕದಿಂದ ಎಲ್ಲವನ್ನೂ ಸಾಧಿಸ ಬಹುದು. ಸಮಾಜದ ಬದ್ಧತೆ ಹಾಗೂ ರಕ್ಷಣೆಗಾಗಿ ಇರುವ ಗೃಹ ರಕ್ಷಕರು ಕೆಲಸದಲ್ಲಿ ಪರಿಪಕ್ವತೆ ಹೊಂದಿರಬೇಕು. ಸಮಾಜವು ನಮ್ಮನ್ನು ಗುರುತಿಸುವಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಉದ್ಯಮಿ ಧೀರಜ್ ಹೆಜಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಕಚೇರಿ ಅಧೀಕ್ಷಕ ರತ್ನಾಕರ, ಕಚೇರಿಯ ಸಿಬ್ಬಂದಿಗಳು, ವಿವಿಧ ಘಟಕಗಳ ಗೃಹರಕ್ಷಕ ಹಾಗೂ ಗೃಹರಕ್ಷಕಿಯರು ಉಪಸ್ಥಿತರಿದ್ದರು. ಸೌಮ್ಯಾ ಬಹುಮಾನಿತರ ಪಟ್ಟಿ ವಾಚಿಸಿದರು.

ಬೈಂದೂರು ಘಟಕದ ಪ್ಲಟೂನ್ ಕಮಾಂಡರ್ ರಾಘವೇಂದ್ರ ಎನ್. ಸ್ವಾಗತಿಸಿ, ಬ್ರಹ್ಮಾವರ ಘಟಕದ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಘಟಕದ ಸೆಕ್ಷನ್ ಲೀಡರ್ ದಿನೇಶ್ ವಂದಿಸಿದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News