ಬೆಳಗಾವಿಯಲ್ಲಿ ಮಹಿಳೆಗೆ ಹಲ್ಲೆ ಪ್ರಕರಣ: ಉಡುಪಿ ಡಿಸಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ
ಉಡುಪಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಮಹಿಳೆಯರಿಗೆ ರಕ್ಷಣೆ ಸಿಗದಂತಾಗಿದೆ. ಬೆಳಗಾವಿಯ ಘಟನೆ ರಾಜ್ಯ ಸರಕಾರದ ಆಡಳಿತ ವೈಫಲ್ಯಕ್ಕೊಂದು ನಿದರ್ಶನ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಬಂದು ಆರು ತಿಂಗಳಾಯಿತು. ಈವರೆಗೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಎಲ್ಲಾ ಹಣವನ್ನೂ ವ್ಯಯಿಸಲಾಗುತ್ತಿದೆ. 200 ಯೂನಿಟ್‌ವರೆಗೆ ವಿದ್ಯುತ್ ಉಚಿತ ಮಾಡಿದ್ದು, ಅತ್ತ ವಿದ್ಯುತ್ ಶುಲ್ಕ ಹೆಚ್ಚಿಸಿ ಜನರಿಗೆ ಆರ್ಥಿಕ ಹೊರೆ ಹೆಚ್ಚಿಸಿದ್ದಾರೆ. ಅಕ್ಕಿ ಕೊಡುತ್ತೇವೆ, ಹಣ ಕೊಡುತ್ತೇವೆ ಎಂದರು. ಆದರೆ ಈಗ ಅಕ್ಕಿಯೂ ಇಲ್ಲ, ಖಾತೆಗೆ ಹಣವೂ ಜಮಾ ಆಗುತ್ತಿಲ್ಲ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದಕ್ಕೆ ಇತ್ತೀಚಿನ ಬೆಳಗಾವಿ ಘಟನೆಯೇ ಸಾಕ್ಷಿಯಾಗಿದೆ. ಘಟನೆ ನಡೆದು ಎರಡು ವಾರ ಕಳೆದರೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಮರಳೂ ಸಿಗುತ್ತಿಲ್ಲ, ಕಟ್ಟಡ ಕಾರ್ಮಿಕರಿಗೆ ಕೆಲಸವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರಿಗೆ ಮನವಿ: ಇದೇ ಸಂದರ್ಭದಲ್ಲಿ ರಾಜ್ಯ ಸರಕಾರದ ಆಡಳಿತ ವೈಫಲ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿ ಉಡುಪಿ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ನಯನಾ ಗಣೇಶ್, ರವಿ ಅಮೀನ್, ಸತ್ಯಾನಂದ ನಾಯಕ್, ಗುರುಪ್ರಸಾದ್ ಶೆಟ್ಟಿ, ಶಿವಕುಮಾರ್ ಅಂಬಲ್ಪಾಡಿ, ವಿಜಯ್ ಕೊಡವೂರು,ರಶ್ಮಿತಾ ಶೆಟ್ಟಿ, ಗಿರೀಶ್ ಆಂಚನ್, ದಾವೂದ್ ಅಬೂಬಕ್ಕರ್, ಅಕ್ಷಯ್ ಶೆಟ್ಟಿ, ಪ್ರಭಾಕರ್ ಪೂಜಾರಿ, ಟಿ.ಜಿ. ಹೆಗ್ಡೆ, ಗಿರಿಧರ ಆಚಾರ್ಯ ಮುಂತಾದವರಿದ್ದರು.