×
Ad

ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ

Update: 2023-12-18 21:52 IST

ಕುಂದಾಪುರ: ಡಿ.18; ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗಂಗೊಳ್ಳಿ ಗ್ರಾಪಂ ಎದುರುಗಡೆ ಸೋಮವಾರ ಧರಣಿ ನಡೆಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಕಟ್ಟಡ ಕಲ್ಯಾಣ ಮಂಡಳಿ ಗಂಭೀರ ಕಾಯಿಲೆಗೊಳಗಾದ ಕಟ್ಟಡ ಕಾರ್ಮಿಕರಿಗೆ ಅತೀ ಕಡಿಮೆ ವೈದ್ಯಕೀಯ ವೆಚ್ಚ ನೀಡುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆ ಮಾಡಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದು ಕಾರ್ಮಿಕರಿಗೆ ಮಾಡುವ ಅನ್ಯಾಯ ಎಂದು ಟೀಕಿಸಿದರು.

ಈ ತಪಾಸಣೆ ಶಿಬಿರವನ್ನು ಎಲ್ಲಾ ನೈಜ ಕಾರ್ಮಿಕರು ಬಹಿಷ್ಕರಿಸಬೇಕು. ಮಂಡಳಿ ತನ್ನ ತೀರ್ಮಾನವನ್ನು ವಾಪಾಸ್ಸು ಪಡೆದು ಈಗಿರುವ ವೈದ್ಯಕೀಯ ವೆಚ್ಚವನ್ನು ಹೆಚ್ಚಳ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿ, ಕಟ್ಟಡ ಕಾರ್ಮಿಕರು ಕೆಲಸ ಸಮಯದಲ್ಲಿ ಅಪಘಾತಗಳಲ್ಲಿ ಮೂಳೆ ಮುರಿತವಾದರೆ ಇನ್ನೀತರ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದು, ಒಳರೋಗಿಯಾಗಿ ದಾಖಲಾಗದಿ ದ್ದರೂ ಮಂಡಳಿಯು ಚಿಕೆತ್ಸೆ ವೆಚ್ಚ ಭರಿಸಬೇಕು. ಅನಗತ್ಯವಾಗಿ ಖರ್ಚು ಮಾಡುತ್ತಿರುವ ಆರೋಗ್ಯ ತಪಾಸಣೆ ನಮ್ಮ ಕಟ್ಟಡ ಕಾರ್ಮಿಕರು ಬಹಿಷ್ಕರಿಸ ಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಮಿಕರ ತಪಾಸಣೆ ಮಾಡಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು, ತಿರಸ್ಕ್ರತವಾದ ಪಿಂಚಣಿ ಪುರಸ್ಕರಿಸ ಬೇಕು, ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಕೂಡಲೇ ಕ್ರಮ ವಹಿಸಬೇಕು ಎಂಬ ಮನವಿಯನ್ನು ರಾಜ್ಯ ಕಾರ್ಮಿಕ ಮಂತ್ರಿಗೆ ಪಂಚಾಯತ್ ಮೂಲಕ ಸಲ್ಲಿಸಲಾಯಿತು. ಗಂಗೊಳ್ಳಿ ಘಟಕದ ಕಾರ್ಯದರ್ಶಿ ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಘಟಕದ ಕೋಶಾಧಿಕಾರಿ ಅಭಿನಂದನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News